ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ – ಓರ್ವ ವಶಕ್ಕೆ

ಬೆಂಗಳೂರು: ಬೊಮ್ಮನಹಳ್ಳಿಯ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರ ಕಾರುಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಶಂಕಿತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶಂಕಿತನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಇನ್ನುಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಏನಿದು ಪ್ರಕರಣ?
ಗುರುವಾರ  ನಸುಕಿನ ಜಾವ 1 ಗಂಟೆ 23 ನಿಮಿಷಕ್ಕೆ ಸಂದರ್ಭದಲ್ಲಿ ಸತೀಶ್ ರೆಡ್ಡಿಯ ಮನೆ ಹಿಂಭಾಗದಿಂದ ಆವರಣ ಪ್ರವೇಶಿಸಿದ ದುಷ್ಕರ್ಮಿಗಳು ಕಾರುಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿ ಆಗಿದ್ದಾರೆ. ಇದನ್ನೂ ಓದಿ: ಬೇಗೂರು ಕೆರೆಯಲ್ಲಿ ಶಿವನ ಪ್ರತಿಮೆ ಸ್ಥಾಪನೆ ಬೆಂಬಲಿಸಿದ್ದಕ್ಕೆ ಸತೀಶ್ ರೆಡ್ಡಿ ಕಾರಿಗೆ ಬೆಂಕಿ?

ಘಟನೆಯಲ್ಲಿ ಫಾರ್ಚುನರ್ ಕಾರು ಸೇರಿದಂತೆ ಎರಡು ಕಾರು ಬೆಂಕಿಗಾಹುತಿ ಆಗಿವೆ. ಕಾರಿನ ಬ್ಯಾಟರಿ ಸ್ಫೋಟಗೊಂಡಾಗ ಭದ್ರತಾ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದಾರೆ. ಅಗ್ನಿಶಾಮಕ ದಳವನ್ನು ಸ್ಥಳಕ್ಕೆ ಕರೆಸುವಷ್ಟರದಲ್ಲಿ ಕಾರುಗಳು ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಗೃಹ ಸಚಿವ ಅರಗ ಜ್ಞಾನೇಂದ್ರ, ಕಂದಾಯ ಮಂತ್ರಿ ಅಶೋಕ್ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಶ್ವಾನ ಪಡೆ ಮೂಲಕ ಆರೋಪಿಗಳ ಪತ್ತೆಗೆ ಯತ್ನಿಸಿದ್ದಾರೆ. ಸುಮಾರು 200 ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಸಿಸಿಬಿ ಪೊಲೀಸರು ನಾಲ್ಕು ವಿಶೇಷ ತಂಡಗಳನ್ನು ರಚಿಸಿ ದುಷ್ಕರ್ಮಿಗಳಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

ಮಧ್ಯ ರಾತ್ರಿ 1 ಗಂಟೆ ಸುಮಾರಿಗೆ ಬೊಮ್ಮನಹಳ್ಳಿ ಪೆಟ್ರೋಲ್ ಬಂಕ್‍ನಲ್ಲಿ ಬೈಕಲ್ಲಿ ಬಂದ ಇಬ್ಬರು ಯುವಕರು ಬಾಟಲ್‍ಗೆ ಪೆಟ್ರೋಲ್ ತುಂಬಿಸಿಕೊಂಡಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇವರೇ ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಇಟ್ಟಿರಬಹುದೇ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *