ಸತತ ಮಳೆ, ಹಳದಿ ಬಣ್ಣಕ್ಕೆ ಮುಂಗಾರು ಬೆಳೆ- ಕೃಷಿ ವಿಜ್ಞಾನಿಗಳಿಂದ ರೈತರಿಗೆ ಸಲಹೆ

ಬೀದರ್: ಜಿಲ್ಲೆಯಲ್ಲಿ ಹಲವು ದಿನಗಳಿಂದ ಸತತವಾಗಿ ಮಳೆ ಸುರಿದಿದ್ದರಿಂದ ನೂರಾರು ಎಕರೆ ಜಮೀನಿನಲ್ಲಿ ನೀರು ನಿಂತು, ರೈತರು ಕಷ್ಟಪಟ್ಟು ಬೆಳೆದಿದ್ದ ಸೋಯಾ, ಉದ್ದು, ಹೆಸರು ಬೆಳೆಗಳು ಹಳದಿ ಬಣ್ಣಕ್ಕೆ ತಿರುಗುತ್ತಿರುವುದು ರೈತರ ಗಾಯದ ಮೇಲೆ ಬರೆ ಎಳದಂತಾಗಿದೆ. ಆದರೆ ಇದಕ್ಕೆ ಕೃಷಿ ವಿಜ್ಞಾನಿಗಳು ಪರಿಹಾರ ಸೂಚಿಸಿದ್ದಾರೆ.

ಬೀದರ್, ಬಸವಕಲ್ಯಾಣ, ಹುಮನಾಬಾದ, ಚಿಟ್ಟಗುಪ್ಪಾ, ಭಾಲ್ಕಿ, ಹುಲಸುರು, ಔರಾದ್, ಕಮಲನಗರ ತಾಲೂಕಿನ ಹಲವು ಜಮೀನುಗಳಲ್ಲಿ ನೀರು ನಿಂತು ಬೆಳೆಗಳ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿವೆ. ಮಳೆಯಿಂದ ಅಪಾರ ಪ್ರಮಾಣದ ಬೆಳೆ ನಾಶವಾಗುವ ಭಯದಲ್ಲಿ ರೈತರು ಹೈರಾಣಾಗಿದ್ದಾರೆ.

ನಿರಂತರ ಮಳೆಯಿಂದ ಜಮೀನುಗಳಲ್ಲಿ ನೀರು ಸಂಗ್ರಹವಾಗಿದೆ ಬೆಳೆಗಳ ಬೇರುಗಳಿಗೆ ಗಾಳಿ ಬೆಳಕು ಲಭಿಸುತ್ತಿಲ್ಲ, ಪೌಷ್ಠಿಕಾಂಶವೂ ದೊರಕುತ್ತಿಲ್ಲ, 4-5 ದಿನಳಿಂದ ಸತತವಾಗಿ ಜಮೀನಿನಲ್ಲಿ ನೀರು ನಿಂತು ಪೋಷಕಾಂಶ ಸೋರಿ ಹೋಗಿದ್ದು, ಹೀಗಾಗಿ ಬೆಳೆಗಳ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತಿವೆ. ಮಳೆಯಿಂದ ಜಮೀನುಗಳಲ್ಲಿ ನೀರು ಸಂಗ್ರಹವಾಗಿದ್ದರೆ ರೈತರು ಕೂಡಲೇ ಜಮೀನಿನಿಂದ ನೀರು ಹೊರ ಹೋಗುವ ವ್ಯವಸ್ಥೆ ಮಾಡಬೇಕು. ಜಮೀನು ಸುತ್ತಲು ತಗ್ಗು ತೋಡಿ ನೀರು ಹೋಗಲು ದಾರಿ ಮಾಡಿಕೊಡಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಎನ್.ಎಂ.ಸುನಿಲ್ ಕುಮಾರ್ ರೈತರಿಗೆ ಮಾಹಿತಿ ನೀಡಿದ್ದಾರೆ.

ಜೊತೆಗೆ ನೀರಿನಲ್ಲಿ ಕರಗುವ 19.19.19 ಗೊಬ್ಬರವನ್ನು ಹಾಕಬೇಕು. ಪ್ರತಿ ಲೀಟರ್ ನೀರಿನಲ್ಲಿ 10 ಗ್ರಾಂ. ಗೊಬ್ಬರ ಹಾಕಿ ಬೆಳೆಗಳ ಮೇಲೆ ಸಿಂಪಡಣೆ ಮಾಡಬೇಕು ಇದರೊಟ್ಟಿಗೆ ತಕ್ಷಣ ಪ್ರತಿ ಎಕರೆಗೆ ಒಂದು ಚೀಲ ಯೂರಿಯಾ ಗೊಬ್ಬರವನ್ನು ಹಾಕಬೇಕು ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *