ಸಚಿವ ಸ್ಥಾನಕ್ಕೆ ಯೋಗೇಶ್ವರ್ ಯೋಗ್ಯನಲ್ಲ – ಅರುಣ್‍ಸಿಂಗ್‍ಗೆ ದೂರು ಸಲ್ಲಿಸಿದ ರೇಣುಕಾಚಾರ್ಯ

– ರಾಜ್ಯ ಉಸ್ತುವಾರಿ ಮುಂದೆ ದೂರಿನ ಸುರಿಮಳೆಗೈದ ಶಾಸಕ

ನವದೆಹಲಿ: ಸಚಿವ ಸ್ಥಾನ ಸಿಗದೆ ನಿರಾಸೆಯಾಗಿರುವ ಶಾಸಕ ರೇಣುಕಾಚಾರ್ಯ ಇಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬಿಜೆಪಿಯ ಹೈಕಮಾಂಡ್‍ನತ್ತ ತೆರಳಿ ಇತರ ನಾಯಕರ ಭೇಟಿಗೂ ಪ್ರಯತ್ನಿಸಿದ್ದಾರೆ.

ದೆಹಲಿಯ ಜಿಆರ್‍ಜಿ ರಸ್ತೆಯಲ್ಲಿರುವ ಅರುಣ್ ಸಿಂಗ್ ನಿವಾಸದಲ್ಲಿ ಭೇಟಿಯಾದ ಶಾಸಕ ರೇಣುಕಾಚಾರ್ಯ, ಸಚಿವ ಸ್ಥಾನ ಸಿಗದ ಹಿನ್ನಲೆಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ.

ದೆಹಲಿಯಲ್ಲಿ ಅರುಣ್ ಸಿಂಗ್ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತಾನಾಡಿದ ರೇಣುಕಾಚಾರ್ಯ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ ಸುಮಾರು 45 ನಿಮಿಷ ಚರ್ಚೆ ಮಾಡಿದ್ದೇನೆ. ನನ್ನ ಬಗ್ಗೆ ಅನೇಕ ವಿಚಾರಗಳನ್ನು ಅವರು ಸಂಗ್ರಹ ಮಾಡಿದ್ದಾರೆ. ನಾನು ನಾಯಕತ್ವದ ವಿರುದ್ಧ ದೂರು ನೀಡಿಲ್ಲ. ಕರಾವಳಿ, ಮಧ್ಯ ಕರ್ನಾಟಕ, ಉತ್ತರ ಕರ್ನಾಟಕಕ್ಕೆ ಸಾಮಾಜಿಕವಾಗಿ ಅನ್ಯಾಯವಾಗಿದೆ. ಆ ಬಗ್ಗೆ ಗಮನಕ್ಕೆ ತಂದಿದ್ದೇನೆ ಎಂದರು.

ನಿನ್ನೆ ಕೆಲವರನ್ನು ಭೇಟಿ ಮಾಡಿ ಕೆಲ ಮಾಹಿತಿಯನ್ನು ನೀಡಿದ್ದೇನೆ. ಯೋಗೇಶ್ವರ್ ವಿರುದ್ಧ ದೂರು ಕೊಟ್ಟಿದ್ದೇನೆ. ಭ್ರಷ್ಟಾಚಾರ ಮಾಡಿದವರು ಸಚಿವರಾಗಿದ್ದಾರೆ. ಇದರಿಂದ ಜನರಿಗೆ ಮೋಸವಾಗಿದೆ. ಸೂಕ್ತ ವ್ಯಕ್ತಿಗಳಿಗೆ ಸೂಕ್ತ ದಾಖಲೆ ನೀಡಿದ್ದೇನೆ ಎಂದು ಆಕ್ರೋಶ ಹೊರಹಾಕಿದರು.

ನಾನು ರಮೇಶ್ ಜಾರಕಿಹೋಳಿ ಯೋಗೇಶ್ವರ್ ವಿಶ್ವಾಸದ ಬಗ್ಗೆ ಅಡ್ಡಿಪಡಿಸುವುದಿಲ್ಲ. ಅವರು ಯೋಗೇಶ್ವರ್ ವಕ್ತಾರರಂತೆ ಕೆಲಸ ಮಾಡಬಾರದು. ಯೋಗೇಶ್ವರ್ ಪುತ್ರಿ ಹೆಸರನಲ್ಲಿ ಸಾಕಷ್ಟು ಆಸ್ತಿ ಮಾಡಿದ್ದಾರೆ. ಇತ್ತಿಚೇಗೆ 50 ಕೋಟಿ ಆಸ್ತಿ ಖರೀದಿ ಮಾಡಿದ್ದಾರೆ. ಮನೆ ಸೇರಿದಂತೆ ಹಲವು ಕಾರು ಖರೀದಿಸಿರುವುದು ನನ್ನ ಗಮನಕ್ಕೆ ಬಂದಿದೆ. ಯೋಗೇಶ್ವರ್ ಅವರಿಂದ ಬಿಜೆಪಿಗೆ ಯಾವುದೇ ಕೊಡುಗೆ ಇಲ್ಲ. ಅವರು ಹಲವು ಪಕ್ಷಗಳೊಂದಿಗೆ ಸೇರಿ ನಂತರ ಬಿಜೆಪಿಗೆ ಬಂದಿದ್ದಾರೆ. ಡಿಕೆಶಿ ಜೊತೆಗೆ ಸೇರಿ ಕಾಂಗ್ರೆಸ್ ಸೇರಲು ಹೋಗಿದ್ದರು ಎಂದು ಯೋಗೇಶ್ವರ್ ವಿರುದ್ಧ ಕಿಡಿಕಾರಿದರು.

ಬಿಡದಿಯಲ್ಲಿ 50 ಎಕರೆ ಆಸ್ತಿ ಮಾಡಿದ್ದಾರೆ. ದೀಪಾವಳಿ ವೇಳೆ ಹೊಸ ಕಾರು ಖರೀದಿ ಮಾಡಿದ್ದಾರೆ. ಮಗಳಿಗಾಗಿ ಹೊಸ ಮನೆ ತೆಗೆದುಕೊಂಡಿದ್ದಾರೆ. ಹಲವು ಹಗರಣದಲ್ಲಿ ಕೈಜೋಡಿಸಿದ್ದಾರೆ ಎಂದು ಸಚಿವ ಯೋಗೇಶ್ವರ್ ವಿರುದ್ಧ ಸಮರ ಸಾರಿರುವ ರೇಣುಕಾಚಾರ್ಯ ಮೆಗಾ ಸಿಟಿ ಹಗರಣಗಳ ದಾಖಲೆ ಹಿಡಿದು ಹೈಕಮಾಂಡ್ ನಾಯಕರ ಭೇಟಿ ಮಾಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *