ಸಚಿವ ಸುರೇಶ್ ಕುಮಾರ್ ಮನಸ್ಸಿಗೆ ಬಂದಂತೆ ಶಿಷ್ಠಾಚಾರ ಪಾಲಿಸ್ತಿದ್ದಾರೆ: ಪುಟ್ಟರಂಗಶೆಟ್ಟಿ ವಾಗ್ದಾಳಿ

ಚಾಮರಾಜನಗರ: ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಮನಸ್ಸಿಗೆ ಬಂದಂತೆ ಶಿಷ್ಠಾಚಾರ ಪಾಲನೆ ಮಾಡುತ್ತಿದ್ದಾರೆ, ರಾತ್ರಿ ಹೊರಟ, ಹಗಲಿನಲ್ಲಿ ಬಂದ. ಎಲ್ಲಿಗೆ ಬಂದ ಎಲ್ಲಿಗೆ ಹೋದ ಅನ್ನೋದೇ ಗೊತ್ತಾಗ್ತಾ ಇಲ್ಲ ಎಂದು ಮಾಜಿ ಉಸ್ತುವಾರಿ ಸಚಿವ, ಶಾಸಕ ಸಿ. ಪುಟ್ಟರಂಗಶೆಟ್ಟಿ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ನನ್ನ ಕ್ಷೇತ್ರದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಆದರೆ ನನಗೆ ತಿಳಿಸದೆ ಸುರೇಶ್ ಕುಮಾರ್ ಕಾಮಗಾರಿ ವೀಕ್ಷಣೆಗೆ ಹೋಗಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ. ಈಗಾಗ್ಲೇ ನಾಲ್ಕೈದು ಬಾರಿ ಇದೇ ರೀತಿ ಮಾಡಿದ್ದಾರೆ ನಾಲ್ಕೈದು ಬಾರಿಯೂ ಕ್ಷಮೆ ಕೇಳಿದ್ದಾರೆ. ಆದರೆ ಮಾಡೋದನ್ನೇ ಮಾಡ್ತಾ ಇದ್ರೆ ನಾನು ನೋಡ್ತಾ ಕುಳಿತುಕೊಳ್ಳಬೇಕಾ ಎಂದು ಹರಿಹಾಯ್ದಿದ್ದಾರೆ.

ಮೊನ್ನೆ ಚಾಮರಾಜನಗರಕ್ಕೆ ಭೇಟಿ ನೀಡಿದ್ದ ಸಚಿವ ಸುರೇಶ್ ಕುಮಾರ್ ಕೃಷಿ, ನೀರಾವರಿ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಪ್ರತ್ಯೇಕ ಸಭೆ ನಡೆಸಿದ್ದರು. ಈ ಸಭೆಗಳಿಗೆ ತಮ್ಮನ್ನು ಆಹ್ವಾನಿಸದೆ ಕಡೆಗಣಿಸಲಾಗಿದೆ ಎಂದು ಕಾಂಗ್ರೆಸ್ ಶಾಸಕ ಸಿ. ಪುಟ್ಟರಂಗಶೆಟ್ಟಿ, ಆರ್. ನರೇಂದ್ರ ಸೇರಿದಂತೆ ಕಾಂಗ್ರೆಸ್ ಜನಪ್ರತಿನಿಧಿಗಳು ಕೋವಿಡ್ ಪರಿಶೀಲನಾ ಸಭೆಯಲ್ಲಿ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದ್ದರು.

ಈ ಎಲ್ಲಾ ಸಭೆಗಳು ಮುಗಿದ ಬಳಿಕ ಸಚಿವ ಸುರೇಶ್ ಕುಮಾರ್, ಹದಗೆಟ್ಟು ಹೋಗಿರುವ ರಾಷ್ಟ್ರೀಯ ಹೆದ್ದಾರಿ 209ಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೆ ಪರಿಶೀಲನೆ ವೇಳೆಯಲ್ಲೂ ಸಚಿವ ಸುರೇಶ್ ಕುಮಾರ್ ತಮ್ಮನ್ನು ಆಹ್ವಾನಿಸದೆ ಕಡೆಗಣಿಸಿದ್ದಾರೆ ಎಂದು ಶಾಸಕ ಪುಟ್ಟರಂಗಶೆಟ್ಟಿ ಗರಂ ಆಗಿದ್ದಾರೆ.

ಇದೇ ವೇಳೆ ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್ ವಿರುದ್ಧವೂ ಕೆಂಡಾಮಂಡಲವಾಗಿರುವ ಪುಟ್ಟರಂಗಶೆಟ್ಟಿ, ಇಡೀ ಜಿಲ್ಲೆಯಲ್ಲಿ ತಾನೊಬ್ಬನೇ ಶಾಸಕ ಎಂದು ನಿರಂಜನ್ ಕುಮಾರ್ ತಿಳಿದುಕೊಂಡಿದ್ದಾರೆ. ನಮ್ಮನ್ನೆಲ್ಲ ದನಕಾಯೋರು ಅನ್ಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ನಾನು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಉಡಿಗಾಲ ಕೆರೆ ತುಂಬಿಸುವ ಯೋಜನೆ ಮಾಡಿದ್ದೆ. ಆದರೆ ಯಾರನ್ನೂ ಕರೆಯದೆ ತಮಗೆ ಬೇಕಾದವರನ್ನು ಕರೆದುಕೊಂಡು ಹೋಗಿ ಉದ್ಘಾಟನೆ ಮಾಡಿದ್ದಾರೆ. ಜವಬ್ದಾರಿಯಿಂದ ತನ್ನ ಕೆಲಸ ತಾನು ಮಾಡಬೇಕು ಮುಂದಿನ ದಿನಗಳಲ್ಲಿ ಸರಿಯಾಗಿ ಹೇಳಬೇಕಾಗುತ್ತದೆ ಎಂದು ಹರಿಹಾಯ್ದಿದ್ದಾರೆ.

ನಾನು ಕ್ಷೇತ್ರದ ಶಾಸಕ ನನ್ನ ಅಧ್ಯಕ್ಷತೆಯಲ್ಲಿ ಎಲ್ಲ ಕಾರ್ಯಕ್ರಮಗಳೂ ನಡೆಯಬೇಕು. ಶಿಷ್ಠಾಚಾರದಲ್ಲಿ ಲೋಪವಾಗದಂತೆ ನೋಡಿಕೊಳ್ಳಿ ಎಂದು ಸಚಿವ ಸುರೇಶ್ ಕುಮಾರ್ ಮಾಜಿ ಸಚಿವ ಪುಟ್ಟರಂಗಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *