ಸಚಿವ ಮುರುಗೇಶ್ ನಿರಾಣಿ ಬಳಿ ಸುಮಾರು 500 ಸಿ.ಡಿಗಳು ಇವೆ: ಅಲಂ ಪಾಷಾ

– ರಾಜ್ಯದಲ್ಲಿ ಮತ್ತೆ ಸಿ.ಡಿ ಬಾಂಬ್
– ಸಿಎಂ ರೇಸ್‍ನಲ್ಲಿರುವ ನಿರಾಣಿ ವಿರುದ್ಧ ಸಿ.ಡಿ ಬಾಂಬ್

ಬೆಂಗಳೂರು: ರಾಜ್ಯದಲ್ಲಿ ಮತ್ತೆ ‘ಸಿ.ಡಿ’ ಬಾಂಬ್ ಮುನ್ನೆಲೆಗೆ ಬಂದಿದೆ. ಮುಖ್ಯಮಂತ್ರಿ ರೇಸ್ ನಲ್ಲಿರುವ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಈ ಆರೋಪ ಕೇಳಿ ಬಂದಿದೆ. ನಿರಾಣಿ ಬಳಿ ಸುಮಾರು 500 ಸಿ.ಡಿಗಳಿವೆ ಎಂದು ಸಾಮಾಜಿಕ ಹೋರಾಟಗಾರ ಅಲಂ ಪಾಷಾ ಗಂಭೀರ ಆರೋಪ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುರುಗೇಶ್ ನಿರಾಣಿ ಬಳಿ ಸುಮಾರು 500 ಸಿ.ಡಿಗಳು ಇವೆ. ಯಾರ್ ಯಾರದ್ದು ಬೇಕಾದ್ರೂ ಸಿಡಿ ಇರಬಹುದು. ಇವರಿಗೆ ಈಗ ಆರೂವರೆ ಕೋಟಿ ಜನರ ಬೆಂಬಲ ಸಿಕ್ಕರೆ ಈ ಸಿಡಿಗಳ ಸಂಖ್ಯೆ 50 ಲಕ್ಷ ಆಗಬಹುದು ಎಂದು ಆರೋಪಿಸಿದ್ದಾರೆ.

ಮುರುಗೇಶ್ ನಿರಾಣಿ ಒಬ್ಬ ಸಿಡಿ ಬಾಬ ಎಂದು ಹೇಳಿರುವ ಆಲಂ ಪಾಷ, ಸಾಕಷ್ಟು ಸೆಕ್ಸ್ ಸಿಡಿಗಳು ಮುರುಗೇಶ್ ನಿರಾಣಿ ಬಳಿ ಇದೆ. ರಾಜಕಾರಣಿ ಮತ್ತು ಪ್ರಮುಖ ನಾಯಕರ ಸೆಕ್ಸ್ ಸಿಡಿಗಳು ನಿರಾಣಿ ಬಳಿ ಇದೆ ಎಂದು ಹೇಳಿದ್ದಾರೆ.

ಬ್ಯಾಂಕ್ ಆಫ್ ಇಂಡಿಯಾದ ಶಹಾಪುರ ಶಾಖೆಯಲ್ಲಿ ನಕಲಿ ಹೆಸರು ಬಳಸಿ ಸಾಲ ಪಡೆದಿದ್ದಾರೆ. ಸಣ್ಣ ರೈತರ ಹೆಸರಲ್ಲಿ ಬೆಳೆ ಸಾಲವನ್ನು ಪಡೆದು ಬಳಿಕ ಆ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ನಕಲಿ ಹೆಸರು, ಖಾತೆಗಳ ಮೂಲಕ ಶ್ರೀ ವಿಜಯ ಸೌಹಾರ್ದ ಕ್ರೆಡಿಟ್ ಸಹಕಾರಿ ಲಿಮಿಟೆಡ್ನ ಲ್ಲಿ ಹೂಡಿಕೆ ಮಾಡಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ರೈತರಿಗೆ ಸಿಗುವ ಸಾಲವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ನಕಲಿ ಆಧಾರ್ ಕಾರ್ಡ್ ಬಳಸಿ ಸಾಲವನ್ನು ಪಡೆದಿದ್ದಾರೆ. ನಿರಾಣಿ ಶುಗರ್ಸ್ ಮೂಲಕ ಕೋಟ್ಯಂತರ ವಂಚನೆ ಮಾಡಿದ್ದಾರೆ. ವಿಜಯ ಸೌಹಾರ್ದ ಕ್ರೆಡಿಟ್ ಸಹಕಾರಿ ಲಿಮೀಟೆಡ್‍ನಲ್ಲಿ 8 ಸಾವಿರ ಕೋಟಿ ವಂಚನೆ ಮಾಡಿದ್ದಾರೆ ಎಂದು ಅಲಂ ಪಾಷ ಆರೋಪಿಸಿದ್ದಾರೆ.

ನಮ್ಮ ಕೇಸಿನಲ್ಲಿ ಮುರುಗೇಶ್ ನಿರಾಣಿ ನನ್ನ ಸಹಿ ಫೋರ್ಜರಿ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಹೀಗಿರುವಾಗ ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ರೈತರಿಗೆ ನೀಡುವ ಸಾಲವನ್ನ ನಿರಾಣಿಯವರು ದುರ್ಬಳಕೆ ಮಾಡಿಕೊಂಡಿದ್ದಾರೆ. ನಿರಾಣಿ ಶುಗರ್ಸ್ ನಲ್ಲಿ ಬಾಯ್ಲರ್ ಬ್ಲಾಸ್ಟ್ ಆಗಿ ನಾಲ್ವರು ಕಾರ್ಮಿಕರು ಸತ್ತರು. ಇದ್ರ ಬಗ್ಗೆ ಏನು ಕ್ರಮ ಆಯ್ತು…? ಇಂತಹವರು ಈ ರಾಜ್ಯದ ಮುಖ್ಯಮಂತ್ರಿಯಾಗಬೇಕಾ ಎಂದು ಪ್ರಶ್ನಿಸಿದ್ದಾರೆ.

ವಿಜಯ ಸೌಹಾರ್ದ ಕೋ ಕ್ರೆಡಿಟ್ ಸಹಕಾರ ಲಿ. ನಲ್ಲಿ ಸುಮಾರು 8 ಸಾವಿರ ಕೋಟಿ ಅವ್ಯವಹಾರ ನಡೆದಿದೆ. ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ ನಷ್ಟ ಆಗಿದೆ ಎಂದಿದ್ದಾರೆ.

Comments

Leave a Reply

Your email address will not be published. Required fields are marked *