ಬೆಳಗಾವಿ: ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿಕೆಗೆ ಬಿಜೆಪಿಯಲ್ಲೇ ಅಸಮಾಧಾನ ಭುಗಿಲೆದ್ದಿದೆ. ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂಬ ಹೇಳಿಕೆಯನ್ನು ಬಿ.ಸಿ.ಪಾಟೀಲ್ ಹಿಂಪಡೆಯಬೇಕು ಎಂದು ರಾಜ್ಯಸಭಾ ಸದಸ್ಯ, ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಈರಣ್ಣಾ ಕಡಾಡಿ ಆಗ್ರಹಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಸ್ವಾಭಿಮಾನಿಗಳು, ಎಂದಿಗೂ ರೈತರು ಹೇಡಿಗಳಾಗಿಲ್ಲ. ಮಾತಿನ ಭರದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿರಬಹುದು. ಕೃಷಿ ಸಚಿವರಿಗೆ ತಮ್ಮ ಹೇಳಿಕೆ ವಾಪಸ್ ಪಡೆಯಲು ಮನವಿ ಮಾಡುತ್ತೇವೆ ಎಂದರು.

ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದೆಂಬ ಅರ್ಥದಲ್ಲಿ ಹೇಳಲು ಹೋಗಿ ಅಪಾರ್ಥ ಸೃಷ್ಟಿಯಾಗಿದೆ. ಕೃಷಿ ನಂಬಿದ ರೈತ ಸ್ವಾಭಿಮಾನಿ, ಯಾರ ಬಳಿಯೂ ಕೈಯೊಡ್ಡಿ ಬದುಕಲ್ಲ. ಇನ್ನೊಬ್ಬರಿಗೆ ಅನ್ನ ಕೊಟ್ಟು ತಾನು ಸಹ ಬದುಕಿದಂತಹ ಸ್ವಾಭಿಮಾನಿ. ರೈತರು ಯಾವತ್ತೂ ಹೇಡಿಗಳು ಆಗುವುದಿಲ್ಲ ಎಂದು ತಿಳಿಸಿದ್ದಾರೆ. ಕೃಷಿ ಸಚಿವರು ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದೆಂಬ ಕಳಕಳಿ ಇಟ್ಟುಕೊಂಡು ಹೇಳಲು ಹೋಗಿದ್ದಾರೆ. ಈ ವೇಳೆ ಎಡವಟ್ಟಿನ ಮಾತನ್ನಾಡಿದ್ದಾರೆ ಎನಿಸುತ್ತದೆ.

ಬಿಸಿ ಪಾಟೀಲ್ ಹೇಳಿದ್ದೇನು?
ಕೊಡಗು ಜಿಲ್ಲೆಯ ಪೋನ್ನಂಪೇಟೆಯಲ್ಲಿ ಮಾತಾನಾಡಿದ್ದ ಬಿಸಿ ಪಾಟೀಲ್, ರೈತರ ಆತ್ಮಹತ್ಯೆಗೆ ನೀರಾವರಿ ಕಾರಣವಲ್ಲ, ಮಂಡ್ಯದಲ್ಲಿ ನೀರಾವರಿ ಸೌಲಭ್ಯವಿದ್ದರೂ ಅತೀ ಹೆಚ್ಚು ರೈತ ಆತ್ಮಹತ್ಯೆ ಪ್ರಕರಣ ವರದಿಯಾಗಿದೆ. ನೀರಾವರಿ ಸೌಲಭ್ಯವಿಲ್ಲದ ಕೋಲಾರದಲ್ಲಿ ಆತ್ಮಹತ್ಯೆ ಪ್ರಕರಣ ಕಡಿಮೆ ಇದೆ ಎಂದಿದ್ದರು.
ಆತ್ಮಹತ್ಯೆ ಮಾಡಿಕೊಳ್ಳುವುದು ಹೇಡಿಗಳು ಮಾಡುವ ಕೆಲಸ. ಯಾರು ಆತ್ಮಹತ್ಯೆಗೆ ಶರಣಾಗಬಾರದು. ಸಾವಯವ ಗೊಬ್ಬರ ಬಳಸಿ, ಸಮಗ್ರ ಕೃಷಿ ಪದ್ಧತಿಯಡಿ ಕೆಲಸ ಮಾಡಿದರೆ ಉತ್ತಮ ಲಾಭ ಸಾಧ್ಯ. ಇಸ್ರೇಲ್ ಮಾದರಿಯಲ್ಲ ಕೋಲಾರ ಮಾದರಿಯಲ್ಲಿ ಕೃಷಿ ಮಾಡುವುದನ್ನು ರಾಜ್ಯಕ್ಕೆ ಹೇಳಿ ಕೊಡವ ಕೆಲಸ ಮಾಡುತ್ತೇವೆ ಎಂದು ಹೇಳಿದ್ದರು.

Leave a Reply