ಸಚಿವ ನಾಗೇಶ್‍ಗೆ ಸಿಎಂ ಶಾಕ್? – ಹೊರಗಿನ ಕೋಟಾದಲ್ಲಿ ಎಂಟ್ರಿ ಕೊಡ್ತಾರಾ ಎನ್.ಮಹೇಶ್?

ಬೆಂಗಳೂರು: ರಾಜ್ಯದಲ್ಲಿ ಸಂಪುಟ ವಿಸ್ತರಣೆಯ ಕಾವು ಜೋರಾಗಿದ್ದು, ಸಚಿವಾಕಾಂಕ್ಷಿಗಳು ಸಿಎಂ ಭೇಟಿಗೆ ನಿವಾಸಕ್ಕೆ ಆಗಮಿಸುತ್ತಿದ್ದಾರೆ. ಕೇವಲ ಸಂಪುಟ ವಿಸ್ತರಣೆಗೆ ಮಾತ್ರ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗಿದೆ. ಬಜೆಟ್ ಬಳಿಕ ಅಬಕಾರಿ ಸಚಿವ ನಾಗೇಶ್ ಅವರಿಗೆ ಕೊಕ್ ಕೊಟ್ಟು, ಆ ಸ್ಥಾನಕ್ಕೆ ಬಿಎಸ್‍ಪಿ ಉಚ್ಛಾಟಿತ ಎನ್.ಮಹೇಶ್ ತರುವ ಬಗ್ಗೆ ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಬಿ.ಎಸ್.ಯಡಿಯೂರಪ್ಪ ವಿಶ್ವಾಸಮತ ಯಾಚನೆ ವೇಳೆ ಕೊಳ್ಳೇಗಾಲದ ಶಾಸಕರಾಗಿರುವ ಎನ್.ಮಹೇಶ್ ಗೈರಾಗುವ ಮೂಲಕ ಬಿಎಸ್‍ವೈ ಟೀಂಗೆ ಹಿಂಬದಿಯಿಂದ ಬೆಂಬಲ ಸೂಚಿಸಿದ್ದರು. ಅಂದಿನ ಋಣಕ್ಕಾಗಿ ಮಹೇಶ್ ಸಂಪುಟ ಸೇರಬಹುದು ಎಂದ ಲೆಕ್ಕಾಚಾರಗಳು ಆರಂಭಗೊಂಡಿವೆ. ಇಂದು ಸಂಜೆ ಚಾಮರಾಜನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಎನ್.ಮಹೇಶ್ ಕಮಲ ಹಿಡಿಯುವ ಸಾಧ್ಯತೆಗಳಿವೆ.

ಮೈಸೂರಿನ ಸುತ್ತೂರಿನಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಎನ್.ಮಹೇಶ್, ಸಚಿವ ಸ್ಥಾನದ ಆಕಾಂಕ್ಷೆ ಯಾರಿಗೆ ಇರೋಲ್ಲ ಹೇಳಿ. ಸಚಿವ ಸ್ಥಾನ ಕೊಟ್ಟರೆ ಉತ್ತಮವಾದ ಕೆಲಸ ಮಾಡುವೆ. ಆದ್ರೆ ಕೊಡೋದು ಬಿಡೋದು ಅವರಿಗೆ ಬಿಟ್ಟದ್ದು.ನನಗೆ ಸಚಿವ ಸ್ಥಾನ ಸಿಗುತ್ತೋ ಇಲ್ವೋ ನನಗೆ ಗೊತ್ತಿಲ್ಲ. ಆ ಬಗ್ಗೆ ಯಾವುದೇ ಚರ್ಚೆ ಸಹ ನಡೆದಿಲ್ಲ. ಆದ್ರೆ ನಾನು ಯಡಿಯೂರಪ್ಪ ಅವರ ಜೊತೆ ಇರುವ ನಿರ್ಧಾರ ಮಾಡಿದ್ದು, ಬಿಜೆಪಿ ಸರ್ಕಾರಕ್ಕೆ ನನ್ನ ಬೆಂಬಲ ಇದೆ. ಸಚಿವ ಸ್ಥಾನ ಕೊಟ್ಟರೆ ಒಳ್ಳೆಯ ಆಡಳಿತ ನಡೆಸಿ ಕ್ಷೇತ್ರ ಹಾಗೂ ರಾಜ್ಯದ ಅಭಿವೃದ್ಧಿ ಮಾಡುವೆ ಎಂದು ಪರೋಕ್ಷವಾಗಿ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟರು.

Comments

Leave a Reply

Your email address will not be published. Required fields are marked *