ಸಚಿನ್‍ರ 100ನೇ ‘ಶತಕ’ ತಪ್ಪಿಸಿದ್ದಕ್ಕೆ ಕೊಲೆ ಬೆದರಿಕೆ ಕರೆ ಬಂದಿದ್ವು: ಟಿಮ್ ಬ್ರೆಸ್ನನ್

ಲಂಡನ್: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ನೂರನೇ ಶತಕ ಗಳಿಸುವ ಅವಕಾಶ ತಪ್ಪಿಸಿದ್ದಕ್ಕೆ ಅವರ ಅಭಿಮಾನಿಗಳು ನನಗೆ ಹಾಗೂ ಅಂಪೈರ್ ರಾಡ್ ಟಕ್ಕರ್ ಅವರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದರು ಎಂದು ಇಂಗ್ಲೆಂಡ್‍ನ ಮಾಜಿ ವೇಗದ ಬೌಲರ್ ಟಿಮ್ ಬ್ರೆಸ್ನನ್ ಹೇಳಿದ್ದಾರೆ.

ಕೊರೊನಾ ಲಾಕ್‍ಡೌನ್‍ನಿಂದಾಗಿ ಕ್ರೀಡಾಪಟುಗಳು ಅನೇಕ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಟೀಂ ಇಂಡಿಯಾ ಆಟಗಾರ ರೋಹಿತ್ ಶರ್ಮಾ ತಾವು ದ್ವಿಶತಕ ಗಳಿಸಿದ್ದಾಗ ಪತ್ನಿ ಯಾಕೆ ಕಣ್ಣೀರು ಹಾಕಿದ್ದರು ಎನ್ನುವ ವಿಚಾರವನ್ನು ತಿಳಿಸಿದ್ದರು. ಸದ್ಯ ಟಿಮ್ ಬ್ರೆಸ್ನನ್ ಅವರು ವಿಶೇಷ ಸಂದರ್ಭವನ್ನು ನೆನೆದಿದ್ದಾರೆ.

2011ರ ಓವೆಲ್ ಟೆಸ್ಟ್ ಪಂದ್ಯದಲ್ಲಿ ಸಚಿನ್ 91 ರನ್ ಗಳಿಸಿದ್ದರು. ಕೇವಲ 9 ರನ್ ಬಾರಿಸಿದ್ದರೆ 100ನೇ ಶತಕ ದಾಖಲಾಗುತ್ತಿತ್ತು. ಆದರೆ ಟಿಮ್ ಬ್ರೆಸ್ನನ್ ಬೌಲಿಂಗ್‍ನಲ್ಲಿ ಮಾಸ್ಟರ್ ಬ್ಲಾಸ್ಟರ್ ಎಲ್‍ಬಿಡಬ್ಲ್ಯೂನಿಂದ ವಿಕೆಟ್ ಒಪ್ಪಿಸಿದರು. ಚೆಂಡು ಲೆಗ್‍ಸ್ಟಂಪ್ ಮಿಸ್ ಆದಂತೆ ಕಂಡು ಬಂದಿದ್ದರಿಂದ ನನಗೆ ಹಾಗೂ ಅಂಪೈರ್ ಟಕ್ಕರ್ ಅವರಿಗೆ ಬೆದರಿಕೆಯ ಕರೆಗಳು ಬಂದಿದ್ದವು ಎಂದು ಬಹಿರಂಗಪಡಿಸಿದ್ದಾರೆ.

“ಅಂಪೈರ್ ಹಾಗೂ ನಾನು ಬೆದರಿಕೆ ಕರೆಯಿಂದ ಆತಂಕಕ್ಕೆ ಒಳಗಾಗಿದ್ದೆವು. ಅಷ್ಟೇ ಅಲ್ಲದೆ ನನಗೆ ಟ್ವಿಟರ್ ನಲ್ಲಿ ಹಾಗೂ ಅಂಪೈರ್ ಟಕ್ಕರ್ ಅವರ ಮನೆಯ ವಿಳಾಸಕ್ಕೆ ಬೆದರಿಕೆಯ ಪತ್ರಗಳು ಬಂದಿದ್ದವು. ಸಚಿನ್ ವಿಕೆಟ್ ಆಗಿದ್ದರೂ ಔಟ್ ಎಂದು ತೀರ್ಪು ಕೊಡಲು ಎಷ್ಟು ಧೈರ್ಯ ನಿಮಗೆ ಎಂದು ಟಕ್ಕರ್ ಅವರಿಗೆ ಕೇಳಲಾಗಿತ್ತು. ಇದರಿಂದಾಗಿ ಅವರು ಪೊಲೀಸ್ ಭದ್ರತೆ ಪಡೆದುಕೊಂಡಿದ್ದರು ಎಂದು ಟಿಮ್ ಬ್ರೆಸ್ನನ್ ಹೇಳಿದ್ದಾರೆ.

ಇಂಗ್ಲೆಂಡ್ ಪರ 23 ಟೆಸ್ಟ್, 85 ಏಕದಿನ ಪಂದ್ಯ ಹಾಗೂ 34 ಟಿ20 ಪಂದ್ಯಗಳನ್ನಾಡಿದ್ದಾರೆ. ಸಚಿನ್ ತೆಂಡೂಲ್ಕರ್ ಅವರು ತಮ್ಮ 99ನೇ ಶತಕವನ್ನು 2011ರ ವಿಶ್ವಕಪ್‍ನಲ್ಲಿ ದಕ್ಚಿಣ ಆಫ್ರಿಕಾ ವಿರುದ್ಧ ಸಿಡಿಸಿದ್ದರು. ನಂತರ 2012ರ ಏಷ್ಯಾಕಪ್‍ನಲ್ಲಿ ಬಾಂಗ್ಲಾದೇಶದ ವಿರುದ್ಧ ತಮ್ಮ 100ನೇ ಶತಕ ಪೂರ್ಣಗೊಳಿಸಿದ್ದರು.

Comments

Leave a Reply

Your email address will not be published. Required fields are marked *