ಸಕ್ಕರೆ ತುಲಾಭಾರ ಮಾಡಿ ಹರಿಕೆ ತೀರಿಸಿದ ಬಿ.ಸಿ.ಪಾಟೀಲ್ ಅಭಿಮಾನಿ ಮುಸ್ತಫಾ

ಹಾವೇರಿ: ಕೃಷಿ ಸಚಿವ ಬಿ.ಸಿ.ಪಾಟೀಲ್ ಅಭಿಮಾನಿ ತಮ್ಮ ನಾಯಕನಿಗೆ ಸಚಿವ ಸ್ಥಾನ ಸಿಗಲಿ ಎಂದು ದೇವರಲ್ಲಿ ಹರಕೆ ಹೊತ್ತಿದ್ದರು. ಸಚಿವ ಸ್ಥಾನ ಸಿಕ್ಕ ಹಿನ್ನೆಲೆ ಇದೀಗ ತಮ್ಮ ಮನೆಗೆ ಸಚಿವರನ್ನು ಕರೆದು, ಸಕ್ಕರೆಯಲ್ಲಿ ತುಲಾಭಾರ ಮಾಡಿದ್ದಾರೆ.

ಜಿಲ್ಲೆಯ ಹಿರೇಕೆರೂರು ತಾಲೂಕಿನ ಹಂಸಭಾವಿ ಗ್ರಾಮದ ಮುಸ್ತಫಾ ಪ್ಯಾಟಿ ತಮ್ಮ ಮನೆಯಲ್ಲಿ ಸಚಿವ ಬಿ.ಸಿ.ಪಾಟೀಲ್ ಅವರಿಗೆ ತುಲಾಭಾರ ಮಾಡಿದ್ದಾರೆ. ಮುಸ್ತಫಾ ಬಿ.ಸಿ.ಪಾಟೀಲರ ಅಪ್ಪಟ ಅಭಿಮಾನಿ. ಬಿ.ಸಿ.ಪಾಟೀಲ್ ಅವರಿಗೆ ಸಚಿವ ಸ್ಥಾನ ಸಿಗಲಿ ಎಂದು ಗ್ರಾಮದಲ್ಲಿರುವ ಉಸ್ಮಾನ್ ಚಾವಲಿ ದರ್ಗಾಗೆ ಹರಕೆ ಕಟ್ಟಿದ್ದರು. ಹರಕೆ ತೀರಿದರೆ ಸಚಿವರಿಗೆ ಸಕ್ಕರೆಯಿಂದ ತುಲಾಭಾರ ಮಾಡೋದಾಗಿ ಉಸ್ಮಾನ ಚಾವಲಿ ದರ್ಗಾದಲ್ಲಿ ಬೇಡಿಕೊಂಡಿದ್ದರಂತೆ. ಬಿ.ಸಿ.ಪಾಟೀಲ್ ಅವರಿಗೆ ಸಚಿವ ಸ್ಥಾನ ಸಿಕ್ಕಿದ್ದು, ಕೃಷಿ ಖಾತೆ ಸಹ ಸಿಕ್ಕಿದೆ. ಹೀಗಾಗಿ ಇಂದು ಸಕ್ಕರೆಯಿಂದ ತುಲಾಭಾರ ಮಾಡಿ ಹರಕೆ ತೀರಿಸಲಾಯಿತು.

ದೊಡ್ಡ ತಕ್ಕಡಿಯಲ್ಲಿ ಒಂದೆಡೆ ಸಕ್ಕರೆ ಚೀಲವಿಟ್ಟು, ಮತ್ತೊಂದೆಡೆ ಸಚಿವರನ್ನು ಕೂರಿಸಿ ತುಲಾಭಾರ ಮಾಡಿ ಹರಕೆ ತೀರಿಸಲಾಯಿತು. ಹಿರೇಕೆರೂರು ಕ್ಷೇತ್ರದಲ್ಲಿ ಒಮ್ಮೆಯೂ ನಿರಂತರವಾಗಿ ಎರಡು ಬಾರಿ ಶಾಸಕರಾದ ಉದಾಹರಣೆಗಳು ಇರಲಿಲ್ಲ. ಆಗಲೂ ಬಿ.ಸಿ.ಪಾಟೀಲ್ ಸತತವಾಗಿ ಎರಡು ಬಾರಿ ಶಾಸಕರಾದರೆ ಸಕ್ಕರೆ ತುಲಾಭಾರ ಮಾಡುವ ಹರಕೆಯನ್ನು ಮುಸ್ತಫಾ ಹೊತ್ತಿದ್ದರು. ಆಗಲೂ ಪಾಟೀಲ್‍ರನ್ನು ಮನೆಗೆ ಕರೆಸಿ ಮುಸ್ತಫಾ ಸಕ್ಕರೆ ತುಲಾಭಾರ ಮಾಡಿದ್ದರು. ಆದರೆ ಹಿರೇಕೆರೂರು ಕ್ಷೇತ್ರ ಸುಮಾರು ವರ್ಷಗಳಿಂದ ಸಚಿವ ಸ್ಥಾನದಿಂದ ವಂಚಿತವಾಗಿತ್ತು. ಹೀಗಾಗಿ ಪಾಟೀಲರಿಗೆ ಸಚಿವ ಸ್ಥಾನ ಸಿಕ್ಕರೆ ಸಕ್ಕರೆಯಿಂದ ತುಲಾಭಾರ ಮಾಡೋದಾಗಿ ಅಭಿಮಾನಿ ಮುಸ್ತಫಾ ದರ್ಗಾದಲ್ಲಿ ಹರಕೆ ಹೊತ್ತಿದ್ದರು.

ಬಿ.ಸಿ.ಪಾಟೀಲ್ ಒಂದು ಕ್ವಿಂಟಲ್ ಐದು ಕೆ.ಜಿ ತೂಕವಿದ್ದಾರೆ. ಹೀಗಾಗಿ ಅವರ ತೂಕಕ್ಕೆ ಸಮನಾಗಿ ಒಂದು ಕ್ವಿಂಟಲ್ ಐದು ಕೆ.ಜಿ. ಸಕ್ಕರೆ ಇಟ್ಟು ತುಲಾಭಾರ ಮಾಡಿದರು. ಅಭಿಮಾನಿ ತೋರಿಸಿದ ಪ್ರೀತಿಗೆ ನಾನು ಋಣಿ. ಜನರ ಪ್ರೀತಿ ಹೆಚ್ಚಾಗಿದೆ, ಇದರಿಂದ ಮೊದಲಿಗಿಂತ ಈಗ ತೂಕ ಹೆಚ್ಚಾಗಿದೆ ಎಂದರು. ತುಲಾಭಾರ ಕಾರ್ಯಕ್ರಮದಲ್ಲಿ ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ಭಾಗಿಯಾಗಿದ್ದು ವಿಶೇಷವಾಗಿತ್ತು.

Comments

Leave a Reply

Your email address will not be published. Required fields are marked *