ಸಂಸದ ಶ್ರೀನಿವಾಸ್ ಪ್ರಸಾದ್‍ಗೆ ಕೊರೊನಾ ಪಾಸಿಟಿವ್

ಮೈಸೂರು: ಚಾಮರಾಜನಗರದ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್‍ಗೆ ಕೊರೊನಾ ಪಾಸಿಟಿವ್ ಬಂದಿದೆ.

ಇಂದು ಮೈಸೂರು ನಿವಾಸದಲ್ಲಿರುವ ಶ್ರೀನಿವಾಸ್ ಪ್ರಸಾದ್ ಅವರಿಗೆ ಕೊರೊನಾ ಪರೀಕ್ಷೆ ಮಾಡಿದ್ದು, ವರದಿಯಲ್ಲಿ ಪಾಸಿಟಿವ್ ಬಂದಿದೆ. ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜೊತೆಗೆ ಅವರು ನಿನ್ನೆ ತಾನೇ ಸಿಎಂ ಪುತ್ರ ಬಿ.ವೈ. ವಿಜಯೇಂದ್ರ, ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್, ಶಾಸಕ ಪ್ರೀತಂ ಗೌಡ ಭೇಟಿ ಮಾಡಿದ್ದರು.

ಈ ವಿಚಾರವಾಗಿ ಟ್ವೀಟ್ ಮಾಡಿರುವ ವಿಜಯೇಂದ್ರ ಅವರು, ಹಿರಿಯ ನಾಯಕರು, ಸಂಸತ್ ಸದಸ್ಯರಾದ ಶ್ರೀ ವಿ.ಶ್ರೀನಿವಾಸ್ ಪ್ರಸಾದ್ ರವರು ಶೀಘ್ರದಲ್ಲಿ ಕೊರೋನಾ ಸೋಂಕಿನಿಂದ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ಅವರ ಸಂಪರ್ಕಕ್ಕೆ ಬಂದಿದ್ದರಿಂದ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದು, ಗೃಹ ಕ್ವಾರಂಟೈನ್ ನಲ್ಲಿದ್ದೇನೆ. ಜೊತೆಗಿದ್ದವರು ಎಲ್ಲ ಮುಂಜಾಗ್ರತೆ ವಹಿಸಬೇಕು ಎಂದು ಈ ಮೂಲಕ ಕೋರುತ್ತೇನೆ ಎಂದಿದ್ದಾರೆ.

ಜೊತೆಗೆ ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್ ಅವರು ಟ್ವೀಟ್ ಮಾಡಿ, ಹಿರಿಯ ನಾಯಕರು, ಮಾಜಿ ಕೇಂದ್ರ ಸಚಿವರು, ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಶ್ರೀನಿವಾಸ ಪ್ರಸಾದ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿರುವುದು ನೋವುಂಟು ಮಾಡಿದೆ. ಅವರು ಶ್ರೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಹಿರಿಯ ರಾಜಕಾರಣಿ ಹಾಗೂ ಚಾಮರಾಜನಗರ ಸಂಸದ ವಿ. ಶ್ರೀನಿವಾಸ ಪ್ರಸಾದ್‍ಗೆ ಕೊರೊನಾ ಸೋಂಕು ತಗುಲಿರುವುದು ಅತ್ಯಂತ ನೋವಿನ ಸಂಗತಿ. ಶ್ರೀಯುತರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಡಿಸಿಎಂ ಲಕ್ಷ್ಮಣ ಸವದಿಯವರು ಕೂಡ ಟ್ವೀಟ್ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *