ಸಂಬಳ ನೀಡದೆ ಕೊರೊನಾ ವಾರಿಯರ್ಸ್‍ಗೆ ಸರ್ಕಾರ ಅವಮಾನಿಸಿದೆ: ಯು.ಟಿ.ಖಾದರ್

ಮಂಗಳೂರು: ವೈದ್ಯರು ಹಾಗೂ ನರ್ಸ್ ಗಳಿಗೆ ಎರಡು ತಿಂಗಳಿನಿಂದ ಸಂಬಳ ಆಗಿಲ್ಲ. ಕೊರೊನಾ ಸಂದರ್ಭದಲ್ಲೇ ವೇತನ ನೀಡದೆ ಸತಾಯಿಸಿದ್ದಾರೆ ಎಂದು ಮಾಜಿ ಸಚಿವ ಯುಟಿ ಖಾದರ್ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ವಾರಿಯರ್ಸ್‍ಗೆ ಸಂಬಳ ನೀಡದೆ ಸರ್ಕಾರ ನಿರ್ಲಕ್ಷಿಸಿದೆ. ವಾರಿಯರ್‍ಗಳಿಗೇ ಸಂಬಳ ನೀಡಿಲ್ಲ ಎಂದಮೇಲೆ ರಾಜ್ಯದಲ್ಲಿ ಕೊರೋನಾ ರೋಗಿಗಳ ಸ್ಥಿತಿ ಹೇಗಿರಬೇಡ ಎಂದು ಪ್ರಶ್ನಿಸಿದ ಅವರು, ತಕ್ಷಣ ಸಂಬಳ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.

ನ್ಯಾಷನಲ್ ಹೆಲ್ತ್ ಮಿಷನ್ ಅಡಿಯಲ್ಲಿ ಬರುವ ವೈದ್ಯರು, ನರ್ಸ್, ಲ್ಯಾಬ್ ಟೆಕ್ನೀಷಿಯನ್ಸ್ ಗೂ ಸಂಬಳ ಆಗಿಲ್ಲ. ಅಂದರೆ ರಾಜ್ಯದಲ್ಲಿ ಒಟ್ಟು 26 ಸಾವಿರ ಮಂದಿಗೆ ಸರ್ಕಾರ ಸಂಬಳ ನೀಡಿಲ್ಲ. ಎರಡು ತಿಂಗಳು ಬಿಡುವಿಲ್ಲದೆ ವೈದ್ಯರು ಕೆಲಸ ಮಾಡಿದ್ದಾರೆ. ಪಿಎಂ ಕೇರ್ ನಲ್ಲಿ ಸಂಗ್ರಹವಾದ ಹಣವನ್ನು ಕೊಡಲಿ. ಜೊತೆಗೆ ಪಿಎಂ ಫಂಡ್ ನಲ್ಲಿ ಸಂಗ್ರಹವಾದ ಹಣದ ಲೆಕ್ಕ ಕೊಡಲಿ. ಯಾವುದಕ್ಕೆ ಖರ್ಚು ಮಾಡಿದ್ದಾರೆ ಎಂದು ಬಹಿರಂಗಪಡಿಸಲಿ. ಸರ್ಕಾರ ತಕ್ಷಣ ವೈದ್ಯರಿಗೆ ಸಂಬಳ ನೀಡದಿದ್ದರೆ ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಯು.ಟಿ.ಖಾದರ್ ಎಚ್ಚರಿಕೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *