ಸಂಪುಟ ವಿಸ್ತರಣೆ – ಸಚಿವ ಸ್ಥಾನಕ್ಕೆ ದೆಹಲಿಯಲ್ಲಿ ಶಾಸಕರ ಲಾಬಿ

ನವದೆಹಲಿ: ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆ ಸಿಎಂ ಬಿ.ಎಸ್ ಯಡಿಯೂರಪ್ಪ ದೆಹಲಿ ತೆರಳಿದ್ದು, ಸಿಎಂ ಬೆನ್ನಲ್ಲೆ ಸಚಿವಾಕಾಂಕ್ಷಿಗಳ ದಂಡು ದೆಹಲಿ ದಂಡಯಾತ್ರೆ ಆರಂಭಿಸಿದ್ದಾರೆ.

ನವದೆಹಲಿಗೆ ತೆರಳಿರುವ ಹೆಚ್.ವಿಶ್ವನಾಥ್, ಎಂ.ಪಿ ರೇಣುಕಾಚಾರ್ಯ, ಮುರಗೇಶ್ ನಿರಾಣಿ ದೆಹಲಿಯಲ್ಲಿ ಲಾಬಿ ಆರಂಭಿಸಿದ್ದಾರೆ. ಹಲವು ಮಂದಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತಿರುವ ಶಾಸಕರು ತಮ್ಮನ್ನು ಸಚಿವ ಸ್ಥಾನಕ್ಕೆ ಪರಿಗಣಿಸುವಂತೆ ಮನವಿ ಮಾಡುತ್ತಿದ್ದಾರೆ.

ದೆಹಲಿಯಲ್ಲಿ ಮಾತನಾಡಿದ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್, ಯಾರನ್ನು ಸಚಿವರನ್ನಾಗಿ ಮಾಡಬೇಕು ಎನ್ನುವುದು ಹೈಕಮಾಂಡ್‍ಗೆ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬಿಟ್ಟ ವಿಚಾರ, ನಾವು ಕೇಳುತ್ತೇವೆ ಆದರೆ ನಿರ್ಧರಿಸುವುದು ಅವರಿಗೆ ಬಿಟ್ಟದ್ದು. ಈಗಾಗಲೇ ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದೇನೆ, ಸಿಎಂ ಯಡಿಯೂರಪ್ಪ ಅವರ ಜೊತೆ ಕೂಡ ಮಾತನಾಡಿದ್ದೇನೆ ನನ್ನ ಅನುಭವ ಬಳಸಿಕೊಳ್ಳುವಂತೆ ಕೇಳಿಕೊಂಡಿದ್ದೇನೆ. ಸದ್ಯ ಯಾರನ್ನೂ ಭೇಟಿ ಮಾಡುತ್ತಿಲ್ಲ, ಶಫರ್ಡ್ ಆರ್ಗನೈಸೇಷನ್ ಕಾರ್ಯಕ್ರಮಕ್ಕಾಗಿ ದೆಹಲಿಗೆ ಬಂದಿದ್ದು ಸಚಿವ ಸ್ಥಾನಕ್ಕೆ ಲಾಬಿ ಮಾಡುವುದಿಲ್ಲ ಎಂದರು.

ಶಾಸಕ ರೇಣುಕಾಚಾರ್ಯ ಮಾತನಾಡಿ, ನಾನು ಸಚಿವಸ್ಥಾನದ ಆಕಾಂಕ್ಷಿ. ಆದರೆ ಲಾಬಿ ಮಾಡಲ್ಲ, ಲಾಬಿ ಮಾಡಲು ದೆಹಲಿಗೆ ಬಂದಿಲ್ಲ. ಸಚಿವ ಸ್ಥಾನ ನೀಡುವುದು, ಬಿಡುವುದು ಯಡಿಯೂರಪ್ಪಗೆ ಬಿಟ್ಟ ವಿಚಾರ ಕಳೆದ ಬಾರಿ ಮಂತ್ರಿಯಾಗಿದ್ದಾಗ ಸಮರ್ಥವಾಗಿ ಕೆಲಸ ಮಾಡಿದ್ದೇನೆ ಎಂದರು.

ಸಿಎಂ ಬದಲಾವಣೆ ಸಂಬಂಧ ಮಾತನಾಡಿ, ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಚುನಾವಣೆಗೂ ಮುನ್ನವೇ ಯಡಿಯೂರಪ್ಪ ಅವರನ್ನು ಸಿಎಂ ಎಂದು ಬಿಂಬಿಸಲಾಗಿತ್ತು ಸಿಎಂ ಬದಲಾವಣೆ ಎನ್ನುವುದು ಊಹಾಪೋಹ ಎಂದರು.

Comments

Leave a Reply

Your email address will not be published. Required fields are marked *