ಸಂಜೆ ತಿಂಡಿಗೆ ಸ್ಪೆಷಲ್ ಮಸಾಲೆ ಬಟಾಣಿ ಉಸ್ಲಿ ಮಾಡಿ

ಇಂದು ವೀಕೆಂಡ್, ನಾಳೆ ಪೂರ್ತಿ ದಿನ ಮನೆಯಲ್ಲಿತೇ ಇರುತ್ತೀರಿ. ದಂಪತಿ ಉದ್ಯೋಗಿಗಳಾಗಿದ್ರೆ ಇಡೀ ವಾರದ ಕೆಲಸವೆಲ್ಲಾ ಬಾಕಿ ಉಳಿದಿರುತ್ತೆ. ಮನೆ ಸ್ವಚ್ಛ, ಬಟ್ಟೆ ತೊಳೆಯುವುದು ಸೇರಿದಂತೆ ಸಾಲು ಸಾಲು ಕೆಲಸಗಳು ಕ್ಯೂನಲ್ಲಿರುತ್ತವೆ. ಅಬ್ಬಾ ಎಲ್ಲ ಕೆಲಸ ಮುಗಿತು ಅನ್ನೋಷ್ಟರಲ್ಲಿ ಸಂಜೆ ಆಗಿರುತ್ತೆ. ಬೆಳಗ್ಗೆಯಿಂದ ದಣಿದ ದೇಹಕ್ಕೆ ಒಂದು ಕಪ್ ಟೀ/ಕಾಫೀ ನೀಡೋ ರಿಲ್ಯಾಕ್ಸ್ ಗೆ ಪದಗಳೇ ಇಲ್ಲ. ಕೆಲಸದ ಒತ್ತಡ ನಡುವೆಯೂ ನೀವು ಸಂಜೆ ಸರಳವಾದ ತಿಂಡಿ ಮಾಡಬಹುದು. ಇಲ್ಲಿದೆ ಸ್ಪೆಷಲ್ ಬಟಾಣಿ ಉಸ್ಲಿ ಮಾಡುವ ವಿಧಾನ

ಬೇಕಾಗುವ ಸಾಮಾಗ್ರಿಗಳು:
ಬಟಾಣಿ – 1 ಕಪ್
(ಹಸಿ ಅಥವಾ ಒಣಗಿದ್ದು, ಒಣಗಿದ ಬಟಾಣಿಯನ್ನು 6-7 ಗಂಟೆ ನೀರಿನಲ್ಲಿ ನೆನೆಸಬೇಕು)
ಹಸಿಮೆಣಸಿನಕಾಯಿ – 2-3
ಕೆಂಪು ಮೆಣಸಿನಕಾಯಿ – 2
ಸಾಸಿವೆ – ಸ್ವಲ್ಪ
ಕರಿಬೇವು – ಸ್ವಲ್ಪ
ಇಂಗು – ಚಿಟಿಕೆ
ಕೊಬ್ಬರಿ ತುರಿ – 3 ಸ್ಪೂನ್
ಜೀರಿಗೆ ಪುಡಿ – ಚಿಟಿಕೆ
ಪೆಪ್ಪರ್ ಪುಡಿ – ಚಿಟಿಕೆ
ಎಣ್ಣೆ – 2 ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಾಡುವ ವಿಧಾನ
* ಒಣಗಿದ ಬಟಾಣಿಯಾದರೇ ಅದನ್ನು 6-7 ಗಂಟೆ ಕಾಲ ನೀರಿನಲ್ಲಿ ನೆನೆಸಿ ಬೇಯಿಸಿಕೊಳ್ಳಬೇಕು.
* ಹಸಿ ಬಟಾಣಿಯಾದರೂ ಹಾಗೆಯೆ ಬೇಯಿಸಿಕೊಳ್ಳಬೇಕು.
* ಬಟಾಣಿ ಬೇಯಿಸಿದ ಮೇಲೆ ಸೋಸಿಕೊಳ್ಳಿ.
* ಈಗ ಒಂದು ಪ್ಯಾನ್‍ಗೆ ಎಣ್ಣೆ ಹಾಕಿ, ಕಾದ ಮೇಲೆ ಸಾಸಿವೆ, ಇಂಗು, ಕರಿಬೇವು ಹಾಕಿ.
* ಬಳಿಕ ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಮುರಿದ ಕೆಂಪು ಮೆಣಸಿನಕಾಯಿಯನ್ನು ಹಾಕಿ ಫ್ರೈ ಮಾಡಿ.
* ಈಗ ನೀರಿಲ್ಲದಂತೆ ಸೋಸಿಕೊಂಡ ಬಟಾಣಿಯನ್ನು ಪ್ಯಾನ್‍ಗೆ ಹಾಕಿ ಮಿಕ್ಸ್ ಮಾಡಿ.
* 2 ನಿಮಿಷ ಆದ್ಮೇಲೆ ಅದಕ್ಕೆ ಜೀರಿಗೆ, ಪೆಪ್ಪರ್ ಪುಡಿ, ಕೊಬ್ಬರಿ ತುರಿ ಸೇರಿಸಿ.. ಮಿಕ್ಸ್ ಮಾಡಿ.. ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಕೆಳಗಿಳಿಸಿದ್ರೆ ಕಾಫಿ ಜೊತೆ ಸವಿಯಲು ಮಸಾಲೆ ಬಟಾಣಿ ಉಸ್ಲಿ ರೆಡಿ.

Comments

Leave a Reply

Your email address will not be published. Required fields are marked *