ಬೆಂಗಳೂರು: ಇಂದು ಸಂಜೆಯೊಳಗೆ ಕಾರುಗಳಿಗೆ ಬೆಂಕಿ ಹಚ್ಚಿದವರ ಬಂಧನಮಾಡುವ ಸಾಧ್ಯತೆಗಳಿವೆ ಎಂದು ಶಾಸಕ ಸತೀಶ್ ರೆಡ್ಡಿ ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಘಟನೆ ಸಂಬಂಧ 25 ಕ್ಕೂ ಹೆಚ್ಚು ಮಂದಿಯನ್ನ ವಿಚಾರಣೆ ಮಾಡಲಾಗಿದೆ. ಅದರಲ್ಲಿ ಮೂವರನ್ನ ಕೃತ್ಯದಲ್ಲಿ ಭಾಗಿಯಾಗಿರೋದು ಮನವರಿಕೆಯಾಗಿದೆ. ಬೇರೆ ಬೇರೆ ಆಯಾಮಾಗಳಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದರು.

ನನಗೆ ವೈಯಕ್ತಿಕವಾಗಿ ಯಾರು ದ್ವೇಷಿಗಳಿಲ್ಲ. ಬೆಂಗಳೂರಿನಲ್ಲಿ ಯಾರು ಏನ್ ಬೇಕಾದ್ರು ಯಾವ ಶಾಸಕರ ಮನೆಗೂ ಹೋಗಬಹುದೆಂಬ ಸಂದೇಶ ಕಳಿಸುವ ದೃಷ್ಟಿಯಿಂದ ಕೃತ್ಯ ಎಸಗಿಸರೋ ಶಂಕೆ ಇದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸಂಜೆಯೊಳಗೆ ಆರೋಪಿಗಳನ್ನು ಅರೆಸ್ಟ್ ಮಾಡುವ ಭರವಸೆ ನೀಡಿರುವುದಾಗಿ ರೆಡ್ಡಿ ಹೇಳಿದರು. ಇದನ್ನೂ ಓದಿ: ಬೇಗೂರು ಕೆರೆಯಲ್ಲಿ ಶಿವನ ಪ್ರತಿಮೆ ಸ್ಥಾಪನೆ ಬೆಂಬಲಿಸಿದ್ದಕ್ಕೆ ಸತೀಶ್ ರೆಡ್ಡಿ ಕಾರಿಗೆ ಬೆಂಕಿ?

ಡಿಜೆ ಹಳ್ಳಿ ಗಲಭೆ ನಡೆದು ಬರೋಬ್ಬರಿ ಒಂದು ವರ್ಷ ಆಗೋದರೊಳಗೆ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿಯ ಎರಡು ಕಾರುಗಳು ಧಗಧಗಿಸಿವೆ. ಮಧ್ಯರಾತ್ರಿ 1 ಗಂಟೆ 23 ನಿಮಿಷಕ್ಕೆ ಸತೀಶ್ ರೆಡ್ಡಿಯ ಮನೆ ಹಿಂಭಾಗದಿಂದ ಆವರಣ ಪ್ರವೇಶಿಸಿದ ದುಷ್ಕರ್ಮಿಗಳು ಕಾರುಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿ ಆಗಿದ್ದರು. ಘಟನೆಯಲ್ಲಿ ಫಾರ್ಚುನರ್ ಕಾರು ಸೇರಿದಂತೆ ಎರಡು ಕಾರು ಬೆಂಕಿಗಾಹುತಿ ಆಗಿವೆ. ಕಾರಿನ ಬ್ಯಾಟರಿ ಸ್ಫೋಟಗೊಂಡಾಗ ಭದ್ರತಾ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದಾರೆ. ಅಗ್ನಿಶಾಮಕ ದಳವನ್ನು ಸ್ಥಳಕ್ಕೆ ಕರೆಸುವಷ್ಟರದಲ್ಲಿ ಕಾರುಗಳು ಸುಟ್ಟು ಕರಕಲಾಗಿವೆ.

ವಿವಾದಿತ ಬೇಗೂರು ಕೆರೆಯಲ್ಲಿ ಪ್ರತಿಪ್ಠಾಪಿಸಿದ್ದ ಶಿವನ ವಿಗ್ರಹಕ್ಕೆ ಪೂಜೆ ಮಾಡಲು ಮುಂದಾಗಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ. ಸತೀಶ್ ರೆಡ್ಡಿ ಚಾಲಕ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಸಿಸಿಬಿ ಪೊಲೀಸರು ಇದೇ ಆಯಾಮದಲ್ಲಿ ತನಿಖೆ ಕೂಡ ನಡೆಸಿದ್ದಾರೆ. ಈಗಾಗಲೇ ಹಲವು ಅನುಮಾನಿತರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.

Leave a Reply