ಬೆಂಗಳೂರು: ಆರ್‍ಎಸ್‍ಎಸ್ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಎಸ್‍ಎಂ ಕೃಷ್ಣ ಅವರು ಹಿಂದುತ್ವದ ಕುರಿತು ಉಪನ್ಯಾಸ ನೀಡಿದ್ದಾರೆ.
ಇಂದು ವಿಜಯದಶಮಿ ಹಿನ್ನೆಲೆ ಬೆಂಗಳೂರಿನ ಕೇಶವ ಕೃಪಾದಲ್ಲಿ ಆರ್‍ಎಸ್‍ಎಸ್ ಕಡೆಯಿಂದ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಸ್‍ಎಂ ಕೃಷ್ಣ ಆರ್‍ಎಸ್‍ಎಸ್ ಟೋಪಿ ಧರಿಸಿ ಮೊದಲ ಬಾರಿಗೆ ಬಹಿರಂಗವಾಗಿ ಹಿಂದುತ್ವ ಮತ್ತು ಭಾರತೀಯತೆ ಬಗ್ಗೆ ಉಪನ್ಯಾಸ ಮಾಡಿದ್ದಾರೆ.

ದೇಶದ ಚರಿತ್ರೆ, ನಮ್ಮ ದೇಶದ ಸಂಸ್ಕೃತಿ ಹಾಗೂ ನೈತಿಕ ನೀತಿಗಳೆ ನಮ್ಮ ದೇಶಕ್ಕೆ ಅಡಿಪಾಯ. ಸಹಸ್ರಾರು ವರ್ಷಗಳಿಂದ ಹಿಂದೂ ಧರ್ಮ ವಸುದೈವ ಕುಟುಂಬ ಎಂಬುದನ್ನು ಪ್ರತಿಪಾದಿಸಿದೆ. ವಿಶ್ವ ಕುಟುಂಬದ ಸಿದ್ಧಾಂತವನ್ನು ನಮ್ಮ ದೇಶದ ಮುಂದೆ ಇಟ್ಟವರು ಆರ್‍ಎಸ್‍ಎಸ್ ಸಂಸ್ಥಾಪಕರು. ಸಂಘದ ಅಗತ್ಯತೆ ಹಿಂದಿನಿಗಿಂತಲೂ ಈಗ ಹೆಚ್ಚಿದೆ. ನನ್ನ ಬಹಳಷ್ಟು ವರ್ಷಗಳ ರಾಜಕೀಯ ಅನುಭವದ ಬಳಿಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಗತ್ಯತೆಯನ್ನು ಕಂಡುಕೊಂಡಿದ್ದೇನೆ ಎಂದರು.

ದೇಶಭಕ್ತಿಯುಳ್ಳ ಸಂಘಕ್ಕೆ ನನ್ನ ಗೌರವವನ್ನು ಅರ್ಪಣೆ ಮಾಡಲು ನಾನು ಇಲ್ಲಿಗೆ ಬಂದಿದ್ದೇನೆ. ಅಮೆರಿಕದಲ್ಲಿ ಪ್ರತಿಯೊಬ್ಬರು ದೇಶಕ್ಕೋಸ್ಕರ ಎರಡು ವರ್ಷಗಳ ಕಾಲ ತಮ್ಮ ಜೀವನ ಮೀಸಲಾಗಿಡಬೇಕು. ನಮ್ಮ ದೇಶದಲ್ಲಿಯೂ ಕೂಡ ಎರಡು ವರ್ಷಗಳ ಕಾಲ ನಮ್ಮನ್ನು ನಾವು ಅರ್ಪಿಸಿಕೊಳ್ಳುವಂತಾಗಬೇಕು. ನಮ್ಮನ್ನು ನಾವು ದೇಶಕ್ಕೆ ಅರ್ಪಣೆ ಮಾಡಿಕೊಳ್ಳುವುದರಿಂದ ನಮ್ಮ ರಾಷ್ಟ್ರಾಭಿಮಾನ ಅಭಿವ್ಯಕ್ತವಾಗುತ್ತದೆ ಎಂದು ಹೇಳಿದರು.

ನಾವು ಯಾವುದಕ್ಕೂ ಅಂಟಿಕೊಳ್ಳಬಾರದು ಎಂಬುದು ನಮ್ಮ ಹಿಂದೂ ಧರ್ಮದಲ್ಲಿಯೇ ಇದೆ. ದೇಶವನ್ನೇ ದೇವರು ಎಂದು ನಂಬಿರುವ ನಾವು ದೇಶಕ್ಕಾಗಿಯೇ ಎಷ್ಟು ಕಾಲ ವಿನಿಯೋಗಿಸುತ್ತೇವೆ ಎಂಬ ಪ್ರಶ್ನೆಯನ್ನು ನಾವೆಲ್ಲರೂ ನಮ್ಮಷ್ಟಕ್ಕೆ ನಾವೇ ಹಾಕಿಕೊಳ್ಳಬೇಕಾಗಿದೆ. ನಮ್ಮ ದೇಶದ ಶೈಕ್ಷಣಿಕ ಪದ್ಧತಿ ಬದಲಾಗಬೇಕಿದೆ. ರಾಷ್ಟ್ರಭಕ್ತಿ ಹಾಗೂ ರಾಷ್ಟ್ರಪ್ರೇಮ ಎಂಬ ಲಸಿಕೆಯನ್ನು ನಾವು ಸಣ್ಣವಯಸ್ಸಿನಲ್ಲಿಯೇ ಮಕ್ಕಳಿಗೆ ಕೊಡಬೇಕಾಗಿದೆ. ಸಂಘದ ಸಂಸ್ಥಾಪಕರೊಂದಿಗೆ ಲೋಕಸಭೆಯಲ್ಲಿ ಕೆಲಸ ಮಾಡುವಂತಹ ಅವಕಾಶವನ್ನು ನಮ್ಮ ಮಂಡ್ಯದ ಜನರು ಕಲ್ಪಿಸಿ ಕೊಟ್ಟಿದ್ದರು ಎಂದು ತಿಳಿಸಿದರು.

Leave a Reply