ಸಂಕಷ್ಟದಲ್ಲಿ ಕೈ ಹಿಡಿದ ನಿರ್ಮಾಪಕನಿಗೆ ವಿಶೇಷ ಧನ್ಯವಾದ ಹೇಳಿದ ಸುದೀಪ್

ಬೆಂಗಳೂರು: ತಮ್ಮ ಕಷ್ಟದ ದಿನದಲ್ಲಿ ಕೈ ಹಿಡಿದ ನಿರ್ಮಾಪಕರೊಬ್ಬರ ಬಗ್ಗೆ ತಿಳಿಸುತ್ತಾ ವೇದಿಕೆ ಮೇಲೆ ಸುದೀಪ್ ಧನ್ಯವಾದ ಹೇಳಿದ್ದಾರೆ.

ಸ್ಯಾಂಡಲ್‍ವುಡ್ ನಟ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿ 25 ವರ್ಷ ಪೂರ್ಣಗೊಂಡಿದೆ. ಈ ಹಿನ್ನೆಲೆ ಕೋಟಿಗೊಬ್ಬ 3 ಚಿತ್ರತಂಡ ಬೆಂಗಳೂರಿನಲ್ಲಿ ಬೆಳ್ಳಿ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸಂದರ್ಭದಲ್ಲಿ ತಮ್ಮ ಸಿನಿ ಜರ್ನಿ ಕುರಿತಂತೆ ಮಾತನಾಡಿದ ಕಿಚ್ಚ ಸುದೀಪ್ ಮಾತನಾಡಿದರು.

ಶ್ರೀಮಂತ ಕುಟುಂಬದಲ್ಲಿ ಬೆಳೆದ ಕಿಚ್ಚ ಸುದೀಪ್ ಹುಚ್ಚ ಸಿನಿಮಾದಲ್ಲಿ ಹೀರೋ ಆಗಿ ಅಭಿನಯಿಸಿದ ಬಳಿಕ ಕಷ್ಟವನ್ನು ಅನುಭವಿಸಿದ್ದಾಗಿ ಹೇಳಿಕೊಂಡಿದ್ದಾರೆ. ಈ ವೇಳೆ ತಮಗೆ ಸಹಾಯ ಮಾಡಿದ ನಿರ್ಮಾಪಕ ರಾಕ್‍ಲೈನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವ್ಯಕ್ತಿ ಮೇಲೆ ನನಗೆ ಬಹಳ ಹೊಟ್ಟೆ ಕಿಚ್ಚಿದೆ. ಕಾರಣ ಅವರನ್ನು ಬೇರೆಯವರು ನನಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಾರೆ. ನಾನು ಮೊದಲಿಗೆ ಕಲಾವಿದನಾಗಿದ್ದಾಗ ನನಗೆ ತೊಂದರೆಯಾದಾಗ ನನ್ನ ಸಹಾಯಕ್ಕೆ ಇಂಡಸ್ಟ್ರಿಯಲ್ಲಿ ಬೆನ್ನ ಹಿಂದೆ ನಿಂತಿದ್ದಾರೆ ಎಂದರೆ ಅದು ರಾಕ್‍ಲೈನ್ ವೆಂಕಟೇಶ್. ಹುಚ್ಚ ಸಿನಿಮಾದ ನಂತರ ಕೈನಲ್ಲಿ ಹಣವಿಲ್ಲದ ಸಂದರ್ಭದಲ್ಲಿ ಮಧ್ಯರಾತ್ರಿ ಅವರಿಗೆ ಕರೆ ಮಾಡಿದೆ. ಕರೆ ಸ್ವೀಕರಿಸಿದ ಕೂಡಲೇ ಸರ್ ನಾನು ನಿಮ್ಮೊಟ್ಟಿಗೆ ಮಾತನಾಡಬೇಕು ಬರುತ್ತೇನೆ ಎಂದು ಹೇಳಿದೆ. ಅದಕ್ಕೆ ಅವರು ಬೇಡ ನಾನೇ ಬರುತ್ತೇನೆ ಎಂದರು. ಆಗ ಇಲ್ಲ ಸರ್ ನಾನೇ ಬರುತ್ತೇನೆ ಎಂದು ಹೇಳಿ ಮಧ್ಯರಾತ್ರಿ 12.30ಕ್ಕೆ ರಾಕ್‍ಲೈನ್‍ರವರ ಮನೆಗೆ ಹೋದೆ. ಈ ವೇಳೆ ಅವರು ನನ್ನ ತಲೆ ತಗ್ಗಿಸಲು ಕೂಡ ಬಿಡದೇ ಏನುಬೇಕಾದರೂ ಕೇಳಿ ಎಂದು ಹೇಳಿ ಹಣ ಸಹಾಯ ಮಾಡಿದರು. ಇಂದಿಗೂ ನಾನು ಆ ಸಂದರ್ಭವನ್ನು ನೆನಪಿಟ್ಟುಕೊಂಡಿದ್ದೇನೆ ಎಂದರೆ ಅದು ಅವರು ನೀಡಿದ್ದ ಹಣದಿಂದ ಅಲ್ಲ. ಬದಲಾಗಿ ಅಂದು ಅವರು ನನ್ನ ಮೇಲಿಟ್ಟುಕೊಂಡಿದ್ದ ಅಭಿಪ್ರಾಯ ಎಂದು ಹೇಳಿದರು.

ಇಂದು ನಾನು ಅವರೊಟ್ಟಗೆ ಏನೇ ಕಿತ್ತಾಡಿಕೊಂಡು, ಮನಸ್ತಾಪ ಮಾಡಿಕೊಂಡಿರಬಹುದು. ಅದರೆ ನನಗೆ ಅವರು ಎಂದಿಗೂ ರಾಕ್‍ಲೈನ್ ವೆಂಕಟೇಶ್ ಅವರೇ. ಯಾವತ್ತಿಗೂ ಅವರು ನನಗೆ ಹಿರಿಯ ಸಹೋದರನೇ. ನನ್ನ ಕೊನೆಯ ಉಸಿರು ಇರುವವರಿಗೂ ನೀವು ಮಾಡಿದ ಸಹಾಯವನ್ನು ಎಂದಿಗೂ ಮರೆಯುವುದಿಲ್ಲ ಎಂದು ನುಡಿದರು.

ಕಿಚ್ಚ ಸುದೀಪ್ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ನಟ ಶಿವರಾಜ್ ಕುಮಾರ್, ರವಿಚಂದ್ರನ್, ರಮೇಶ್ ಅರವಿಂದ್, ರಾಕ್‍ಲೈನ್ ವೆಂಕಟೇಶ್, ರವಿಶಂಕರ್ ಹಲವಾರು ಗಣ್ಯರು ಪಾಲ್ಗೊಂಡಿದ್ದರು.

Comments

Leave a Reply

Your email address will not be published. Required fields are marked *