ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ ಚಿತ್ರ ಮದಗಜದ ಚಿತ್ರೀಕರಣ ಆರಂಭವಾಗಿದೆ. ಇತ್ತ ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಅವರ ಕೆಜಿಎಫ್- 2 ಚಿತ್ರದ ಶೂಟಿಂಗ್ ಸಹ ಕೊನೆಯ ಹಂತ ತಲುಪಿದೆ. ಹೀಗಿರುವಾಗಲೇ ಹೊಸ ಸುದ್ದಿಯೊಂದ ಹೊರ ಬಿದ್ದಿದೆ.

ಲಾಕ್‍ಡೌನ್ ಹಿನ್ನೆಲೆ ಸಿನಿಮಾ ಚಿತ್ರೀಕರಣ ಸಂಪೂರ್ಣ ಸ್ಥಗಿತವಾಗಿದೆ. ಇದರ ಎಫೆಕ್ಟ್ ಮದಗಜ ಸಿನಿಮಾ ಮೇಲೂ ಬಿದ್ದಿದೆ. ಇತ್ತೀಚೆಗಷ್ಟೇ ಹಿರೋಯಿನ್ ಆಯ್ಕೆಯಾಗಿದ್ದು, ಚಿತ್ರ ತಂಡ ಸೇರಿದ್ದರು. ನಂತರ ಮೊದಲ ಹಂತದ ಚಿತ್ರೀಕರಣಕ್ಕಾಗಿ ಸಿನಿಮಾ ತಂಡ ವಾರಾಣಸಿಗೆ ತೆರಳಿತ್ತು. ಅಲ್ಲಿನ ಚಿತ್ರೀಕರಣ ಪೂರ್ಣಗೊಳಿಸಿಕೊಂಡು ಬೆಂಗಳೂರಿಗೆ ಮರಳುತ್ತಿದ್ದಂತೆ ಲಾಕ್‍ಡೌನ್ ಘೋಷಣೆಯಾಯಿತು. ಹೀಗಾಗಿ ಚಿತ್ರೀಕರಣ ಅಲ್ಲಿಗೆ ನಿಂತಿದೆ.

ಎರಡನೇ ಹಂತದ ಚಿತ್ರೀಕರಣವನ್ನು ಮೈಸೂರಿನಲ್ಲಿ ಮಾಡಲು ನಿರ್ಧರಿಸಲಾಗಿದ್ದು, ಅರಮನೆ ನಗರಿಯಲ್ಲಿ ಇನ್ನೇನು ಚಿತ್ರಕರಣ ಆರಂಭಿಸುವಷ್ಟರಲ್ಲಿ ಲಾಕ್‍ಡೌನ್ ನಿಂದಾಗಿ ಸ್ಥಗಿತಗೊಂಡಿತು. ಹೀಗಾಗಿ ಇಡೀ ಸಿನಿಮಾ ರಂಗ ಸ್ತಬ್ಧವಾಗಿತು. ಹೀಗಾಗಿ ಎಲ್ಲರೂ ಅವರ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಆದರೆ ಲಾಕ್‍ಡೌನ್‍ನಿಂದಾಗಿ ಮದಗಜ ತಂಡಕ್ಕೆ ಮತ್ತೊಂದು ಅವಕಾಶ ಸಿಕ್ಕಿದೆ.

ಹೌದು ಲಾಕ್‍ಡೌನ್‍ನಿಂದಾಗಿ ಮದಗಜ ತಂಡಕ್ಕೆ ಒಳ್ಳೆಯ ಅವಕಾಶ ಸಿಕ್ಕಿದ್ದು, ಚಿತ್ರದ ಸ್ಕ್ರಿಪ್ಟ್‍ನ್ನು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಫೈನಲ್ ಮಾಡುತ್ತಿದ್ದಾರೆ. ಮಹೇಶ್ ಕುಮಾರ್ ನಿರ್ದೇಶನದಲ್ಲಿ ಚಿತ್ರ ಮೂಡಿ ಬರುತ್ತಿದ್ದು, ಉತ್ತರ ಪ್ರದೇಶದಲ್ಲಿ ನಡೆದ ಚಿತ್ರೀಕರಣವನ್ನಾಧರಿಸಿ ಕಥೆ ಬರೆಯುತ್ತಿದ್ದಾರೆ. ಈ ಸ್ಕ್ರಿಪ್ಟ್‍ನ್ನು ಪ್ರಶಾಂತ್ ನೀಲ್ ಅವರು ಫೈನಲ್ ಮಾಡುತ್ತಿದ್ದು, ಹೆಚ್ಚು ಜನರನ್ನು ತಲುಪುವ ರೀತಿಯಲ್ಲಿ ಕಟ್ಟಿಕೊಡಲಿದ್ದಾರೆ ಎಂದು ನಿರ್ಮಾಪಕ ಉಮಾಪತಿ ಮಾಹಿತಿ ನೀಡಿದ್ದಾರೆ.

ಚಿತ್ರದ ನಾಯಕ ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ಈ ಕುರಿತು ಪ್ರತಿಕ್ರಿಯಿಸಿದ್ದು, ನಮ್ಮ ಚಿತ್ರದ ಕಥೆಯನ್ನು ಪ್ರಶಾಂತ್ ನೀಲ್ ಫೈನಲ್ ಮಾಡುತ್ತಾರೆ ಎಂಬುದನ್ನು ತಿಳಿದು ತುಂಬಾ ಸಂತಸವಾಯಿತು. ಮದಗಜ ಚಿತ್ರ ಸಹ ಸಖತ್ ಮನರಂಜೆ ನೀಡಲಿದೆ. ಅಲ್ಲದೆ ಉಗ್ರಂ ಸಿನಿಮಾ ರೀತಿಯ ಟೋನ್ ಹೊಂದಿದೆ. ಪ್ರಶಾಂತ್ ನೀಲ್ ಸ್ಕ್ರಿಪ್ಟ್ ಪರಿಶೀಲಿಸಿದ ಬಳಿಕ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರೊಂದಿಗೆ ಮ್ಯೂಸಿಕ್ ಕೆಲಸದಲ್ಲಿ ಬ್ಯುಸಿಯಾಗುತ್ತೇವೆ ಎಂದು ತಿಳಿಸಿದ್ದಾರೆ.

ಶೀಘ್ರವೇ ಸರ್ಕಾರ ಚಿತ್ರೀಕರಣಕ್ಕೆ ಅವಕಾಶ ನೀಡಬಹುದೆಂಬ ಭರವಸೆಯಲ್ಲಿದ್ದೇವೆ. ಅವಕಾಶ ಸಿಗುತ್ತಿದ್ದಂತೆ ಜುಲೈನಿಂದ ಮೈಸೂರಿನಲ್ಲಿ ಚಿತ್ರೀಕರಣ ಆರಂಭಿಸುತ್ತೇವೆ ಎಂದು ಶ್ರೀ ಮುರಳಿ ತಿಳಿಸಿದ್ದಾರೆ.

Leave a Reply