‘ಶೇಕಿಂಗ್‌ ಡೆಲ್ಲಿ’ ಟಾಸ್ಕ್‌ – ಉಗ್ರನ ಮನೆಯಲ್ಲಿ ಸಿಕ್ಕಿದ 19 ವಸ್ತುಗಳ ಪೂರ್ಣ ಮಾಹಿತಿ ಇಲ್ಲಿದೆ

ನವದೆಹಲಿ: ಏಕಾಂಗಿಯಾಗಿ ದೆಹಲಿಯಲ್ಲಿ ಭಾರೀ ಪ್ರಮಾಣದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ಐಸಿಸ್‌ ಉಗ್ರನೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಆತನ ಮನೆಯಲ್ಲಿರುವ ಸೆರೆ ಸಿಕ್ಕಿದ ಸ್ಫೋಟಕಗಳನ್ನು ನೋಡಿ ಭದ್ರತಾ ಪಡೆಯ ಸಿಬ್ಬಂದಿಯೇ ಶಾಕ್‌ ಆಗಿದ್ದಾರೆ.

ಮುಸ್ತಾಕೀನ್‌ ಖಾನ್‌ ಅಲಿಯಾಸ್‌ ಅಬು ಯೂಸುಫ್‌ ಬೈಕ್‌ನಲ್ಲಿ 2 ತೀವ್ರ ಸ್ಫೋಟ ಸಾಮರ್ಥ್ಯದ ಪ್ರೆಷರ್‌ ಕುಕ್ಕರ್‌ ಬಾಂಬ್‌ಗಳನ್ನು ಒಯ್ಯುತ್ತಿದ್ದಾಗ ದೆಹಲಿ ಪೊಲೀಸರು ರೆಡ್‌ ಹ್ಯಾಂಡ್‌ ಆಗಿ ಬಂಧಿಸಿದ್ದಾರೆ. ಅವನಿಂದ ಎರಡು ಸಜೀವ ಬಾಂಬ್‌ಗಳ ಜೊತೆಗೆ ಒಂದು ಪಿಸ್ತೂಲ್‌ ಹಾಗೂ ಗುಂಡುಗಳು ಮತ್ತು ಮೋಟರ್‌ಸೈಕಲ್‌ ವಶಪಡಿಸಿಕೊಳ್ಳಲಾಗಿದೆ.  ಇದನ್ನೂ ಓದಿ: ‘ಶೇಕಿಂಗ್‌ ಡೆಲ್ಲಿ’ ಟಾಸ್ಕ್‌ – ಉಗ್ರನಿಗೆ ಭಟ್ಕಳ ಮೂಲದ ಸಫಿ ಅರ್ಮರ್‌ ಜೊತೆ ನಿಕಟ ಸಂಪರ್ಕ 

ವಿಶೇಷ ಘಟಕದ ಡಿಸಿಪಿ ಪಿ.ಎಸ್‌.ಕುಶ್ವಾಹ ಪ್ರತಿಕ್ರಿಯಿಸಿ, ಆ.15ರಂದು ಸ್ವಾತಂತ್ರ್ಯೋತ್ಸವದ ವೇಳೆ ಈತ ದೆಹಲಿಯಲ್ಲಿ ದಾಳಿ ನಡೆಸಲು ಮುಂದಾಗಿದ್ದ. ಆದರೆ ಭಾರಿ ಭದ್ರತೆ ಇದ್ದ ಕಾರಣ ಆತನಿಗೆ ಕೃತ್ಯ ಎಸಗಲು ಸಾಧ್ಯವಾಗಿರಲಿಲ್ಲ. ಈಗ ಭದ್ರತೆ ಕಡಿಮೆ ಇದೆ ಎಂದು ತಿಳಿದು ದಾಳಿಗೆ ಮುಂದಾಗಿದ್ದ. ಈತನ ಬಳಿಯಿರುವ ಬಾಂಬ್‌ಗಳು ಸ್ಫೋಟಕ್ಕೆ ಸಿದ್ಧಗೊಂಡ ಸ್ಥಿತಿಯಲ್ಲಿದ್ದವು. ಟೈಮರ್‌ ಅಳವಡಿಕೆ ಮಾತ್ರ ಬಾಕಿಯಿತ್ತು ಎಂದು ತಿಳಿಸಿದ್ದಾರೆ.

ಆರಂಭದಲ್ಲಿ ಬಾಂಬ್‌ ದಾಳಿ ನಡೆಸಿದ ಬಳಿಕ ಆತ ಆತ್ಮಹುತಿ ದಾಳಿ ನಡೆಸುವ ಪ್ಲಾನ್‌ ಮಾಡಿದ್ದ. ಈತನ ಚಲನವಲನ ಬಗ್ಗೆ ಕಳೆದ 1 ವರ್ಷದಿಂದ ನಿಗಾ ಇಟ್ಟಿದ್ದೆವು. ಈಗ ಬಾಂಬ್‌ನೊಂದಿಗೆ ಅಬು ಯೂಸುಫ್‌ನನ್ನು ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ. ಉತ್ತರಪ್ರದೇಶದ ಮನೆಯಲ್ಲಿ ದೆಹಲಿ ಪೊಲೀಸರು ಶೋಧ ನಡೆಸಿ ಅಪಾರ ಪ್ರಮಾಣದ ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.

ಏನು ಸಿಕ್ಕಿದೆ?
1. 3 ಸ್ಫೋಟಕ ಪ್ಯಾಕೆಟ್‌ಗಳನ್ನು ಹೊಂದಿರುವ ಒಂದು ಕಂದು ಬಣ್ಣದ ಜಾಕೆಟ್
2. 4 ಸ್ಫೋಟಕ ಪ್ಯಾಕೆಟ್‌ಗಳನ್ನು ಹೊಂದಿರುವ ಒಂದು ನೀಲಿ ಬಣ್ಣದ ಚೆಕ್ ವಿನ್ಯಾಸದ ಜಾಕೆಟ್(ಪ್ರತಿ ಸ್ಫೋಟಕ ಪ್ಯಾಕೆಟ್‌ಗಳನ್ನು ಜಾಕೆಟ್‌ಗಳಿಂದ ತೆಗೆದು ನಿಷ್ಕ್ರಿಯಗೊಳಿಸಲಾಗಿದೆ. ಈ ಸ್ಫೋಟಕಗಳ ಪ್ಯಾಕೆಟ್‌ಗಳನ್ನು ಪಾರದರ್ಶಕ ಟೇಪ್‌ನಿಂದ ಸುತ್ತಿಡಲಾಗಿತ್ತು)
3. ಸರಿಸುಮಾರು ಮೂರು ಕಿ.ಗ್ರಾಂ ತೂಕದ ಸ್ಫೋಟಕಗಳನ್ನು ಹೊಂದಿರುವ ಒಂದು ಚರ್ಮದ ಬೆಲ್ಟ್‌
4. 4 ವಿಭಿನ್ನ ಪಾಲಿಥಿನ್‌ಗಳಲ್ಲಿ 8-9 ಕಿ.ಗ್ರಾಂ ತೂಕದ ಸ್ಫೋಟಕ.
5. ಸಿಲಿಂಡರಾಕಾರದ ಲೋಹದ ಪೆಟ್ಟಿಗೆಗಳು, ಇದರಲ್ಲಿ ಸ್ಫೋಟಕ ಮತ್ತು ಎಲೆಕ್ಟ್ರಿಕ್‌ ವಯರ್‌ಗಳು ಇತ್ತು.

6. ಎರಡು ಸಿಲಿಂಡರಾಕಾರದ ಲೋಹದ ಪೆಟ್ಟಿಗೆಗಳು ಇದರಲ್ಲಿ ಬಾಲ್ ಬೇರಿಂಗ್‌ಗಳನ್ನು ಇಡಲಾಗಿತ್ತು.
7. ಒಂದು ಮರದ ಮುರಿದ ಪೆಟ್ಟಿಗೆ (ಪಿಸ್ತೂಲಿನಿಂದ ಟಾರ್ಗೆಟ್‌ ಶೂಟ್‌ ಮಾಡಲು ಬಳಕೆ)
8. ಒಂದು ಐಸಿಸ್ ಧ್ವಜ
9. ವಿಭಿನ್ನ ವ್ಯಾಸ ಹೊಂದಿರುವ 30 ಬಾಲ್ ಬೇರಿಂಗ್‌ಗಳು
10. 12 ಬಾಲ್‌ ಬೇರಿಂಗ್‌ ಪ್ಯಾಕೆಟ್‌ ಇರುವ ಒಂದು ಸಣ್ಣ ಪೆಟ್ಟಿಗೆ

11. ತಲಾ 4 ವೋಲ್ಟ್‌ನ ಎರಡು ಲಿಥಿಯಂ ಬ್ಯಾಟರಿಗಳು
12. 9 ವೋಲ್ಟ್‌ನ ಒಂದು ಲಿಥಿಯಂ ಬ್ಯಾಟರಿ
13. ಎರಡು ಸಿಲಿಂಡರಾಕಾರದ ಲೋಹದ ಪೆಟ್ಟಿಗೆಗಳು
14. ಹಳದಿ ಬಣ್ಣದ ಒಂದು ಆಂಪಿಯರ್ ಮೀಟರ್
15. ಎರಡು ಕಬ್ಬಿಣದ ಬ್ಲೇಡ್‌ಗಳು. ಎರಡೂ ಬದಿಗಳು ವಿದ್ಯುತ್ ತಂತಿಗಳಿಗೆ ಸಂಪರ್ಕ ಹೊಂದುವಂತೆ ಜೋಡಣೆ

16. ಒಂದು ತಂತಿ ಕಟ್ಟರ್
17. ಎರಡು ಮೊಬೈಲ್ ಚಾರ್ಜರ್‌ಗಳು
18. ವಿದ್ಯುತ್ ತಂತಿಗಳೊಂದಿಗೆ ಜೋಡಿಸಲಾದ ಟೇಬಲ್ ಅಲಾರಾಂ ವಾಚ್
19. ಒಂದು ಕಪ್ಪು ಬಣ್ಣದ ಟೇಪ್

Comments

Leave a Reply

Your email address will not be published. Required fields are marked *