ಶೀಘ್ರವೇ ಶುಲ್ಕ ನಿಗದಿ ಆದೇಶ ಮಾಡ್ತೀವಿ: ಸುರೇಶ್ ಕುಮಾರ್

– ನಾನು ಯಾವುದೇ ಲಾಬಿಗೆ ಮಣಿದಿಲ್ಲ
– ಲಾಬಿಗೆ ಶರಣಾಗೋ ಸ್ಥಿತಿ ಬಂದ್ರೆ ಈ ಸ್ಥಾನವೇ ಬೇಡ

ಬೆಂಗಳೂರು: ಶಾಲೆಯ ಶುಲ್ಕ ನಿಗದಿ ಮಾಡುವ ವಿಚಾರದಲ್ಲಿ ನಾವು ಅಂತಿಮ ಹಂತದಲ್ಲಿ ಇದ್ದೇವೆ. ಶೀಘ್ರವೇ ಶುಲ್ಕ ನಿಗದಿ ಆದೇಶ ಮಾಡ್ತೀವಿ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಭರವಸೆ ನೀಡಿದ್ದಾರೆ.

ಪೋಷಕರ ಶುಲ್ಕ ಸಮರ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಶುಲ್ಕ ವಿಚಾರ ಡೆಡ್ ಲೈನ್ ಕೊಟ್ಟು ಪರಿಹಾರ ಮಾಡುವ ವಿಚಾರ ಅಲ್ಲ. ಇದು ಪೋಷಕರ ದೊಡ್ಡ ಸಮಸ್ಯೆ. ಹಾಗೆಯೇ ಖಾಸಗಿ ಶಾಲಾ ಶಿಕ್ಷಕರು ಸಂಬಳ ಪಡೆಯದವರ ನೋವಿನ ಕಥೆ. ಎರಡನ್ನೂ ನಾನು ಬ್ಯಾಲೆನ್ಸ್ ಮಾಡಬೇಕು ಎಂದರು.

ದಿಢೀರ್ ಅಂತ ನಾವು ಶುಲ್ಕದ ಬಗ್ಗೆ ನಿರ್ಧಾರ ಮಾಡಲು ಆಗಲ್ಲ. ಪೋಷಕರು ಪ್ರತಿಭಟನೆ ಮಾಡುವುದು ಬೇಡ. ಪ್ರತಿಭಟನೆ ಮಾಡಿದ್ರೆ ಪರಿಹಾರ ಸಿಗಲ್ಲ. ಪರಿಹಾರ ಕೊಡೋ ಹಂತದಲ್ಲಿ ನಾವು ಇದ್ದೇವೆ. ಬೇಕಿದ್ರೆ ಇನ್ನೂ ಸಲಹೆಗಳನ್ನ ಸರ್ಕಾರಕ್ಕೆ ಕೊಡಲಿ. ಅದು ಬಿಟ್ಟು ಪ್ರತಿಭಟನೆ ಮಾಡೋದು ಬೇಡ ಎಂದು ಮನವಿ ಮಾಡಿಕೊಂಡರು.

ಶೀಘ್ರವೇ ಶುಲ್ಕ ನಿಗದಿ ಮಾಡ್ತೀವಿ. ಎಲ್ಲರೂ ಒಪ್ಪುವ ಸೂತ್ರ ರೆಡಿ ಮಾಡ್ತೀವಿ. ನಾನು ಯಾವುದೇ ಖಾಸಗಿ ಶಾಲೆಗಳ ಲಾಬಿಗೆ ಮಣಿದಿಲ್ಲ. ನಾನು ಮಣಿದಿದ್ದರೆ ಈ ವಿಷಯ ಚರ್ಚೆಗೆ ತೆಗೆದುಕೊಳ್ತಿರಲಿಲ್ಲ. ಖಾಸಗಿ ಲಾಬಿಗೆ ಅಥವಾ ಯಾವುದೋ ಲಾಬಿಗೋ ಶರಣಾಗೋ ಸ್ಥಿತಿಗೆ ಬಂದರೆ ಈ ಸ್ಥಾನವೇ ನನಗೆ ಬೇಡ. ನಾನು ನಾಡಿನ ಮಕ್ಕಳ ಪೋಷಕರ ಪರವಾಗಿದ್ದು, ಪೋಷಕರು ಮಕ್ಕಳ ಪರ ಕೆಲಸ ಮಾಡೋನಾಗಿದ್ದೇನೆ. ಮಕ್ಕಳಿಗೆ ತೊಂದರೆ ಆಗುವ ಕೆಲಸ ಮಾಡಲ್ಲ. ಶೀಘ್ರವೇ ಸೂತ್ರ ಬಿಡುಗಡೆ ಮಾಡ್ತೀನಿ ಎಂದರು.

ಇದೇ ವೇಳೆ ಪೂರ್ಣ ಪ್ರಮಾಣದ ಶಾಲಾ-ಕಾಲೇಜು ಪ್ರಾರಂಭ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಇಂದು ಮಧ್ಯಾಹ್ನ ತಜ್ಞರ ಸಮಿತಿ ಜೊತೆ ಸಭೆ ಮಾಡಲಾಗುತ್ತೆ. ತಜ್ಞರಿಗೆ ಶಿಕ್ಷಣ ಇಲಾಖೆ ಸಿದ್ಧತೆ ಬಗ್ಗೆ ತಿಳಿಸ್ತೀವಿ. ತಜ್ಞರ ವರದಿ ನಂತರ ಮುಂದಿನ ತೀರ್ಮಾನ ಮಾಡ್ತೀವಿ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *