ಶೀಘ್ರದಲ್ಲಿ ಸಾರಿಗೆ ನೌಕರರ ಬೇಡಿಕೆ ಈಡೇರಿಕೆ: ಲಕ್ಷ್ಮಣ ಸವದಿ

ಕಾರವಾರ: ಸಾರಿಗೆ ನೌಕರರು ಸರ್ಕಾರದ ಮುಂದೆ ಹತ್ತು ಬೇಡಿಕೆಯನ್ನು ಇಟ್ಟಿದ್ದರು. ಈ ಹತ್ತು ಬೇಡಿಕೆಯಲ್ಲಿ 8 ಬೇಡಿಕೆ ಈಡೇರಿಸಿದ್ದೇವೆ. ನಾಲ್ಕು ಬೇಡಿಕೆ ಈಡೇರಿಸಲು ಸಮಯಾವಕಾಶ ಕೇಳಿದ್ದೇವೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬೇಡ್ತಿ ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೌಕರರ ಸಂಘಟನೆಗಳು ಮೂರ್ನಾಲ್ಕು ಇದೆ. ಪ್ರತಿಯೊಬ್ಬರೂ ಒಂದೊಂದು ಬಾರಿ ಒಂದೊಂದು ಬೇಡಿಕೆ ಇಡುತ್ತಿದ್ದಾರೆ. ನೌಕರರೊಂದಿಗೆ ಇನ್ನೆರೆಡು ಸಭೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ, ನಾವು ಒಪ್ಪಿಕೊಂಡಂತೆ ನೌಕರರ ಬೇಡಿಕೆ ಈಡೇರಿಸುತ್ತೇವೆ ಎಂದರು.

ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ನಾನು ಸ್ಪರ್ದಿಸುವುದಿಲ್ಲ, ಇದು ಗಾಳಿ ಸುದ್ದಿ, ಕೇವಲ ಉಸ್ತುವಾರಿ ಮಾತ್ರ ತೆಗೆದುಕೊಂಡಿದ್ದೇನೆ. ನಾವು ಈ ಉಪ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಂಚಮಸಾಲಿಗಳು ಹೋರಾಟ ಮಾಡುತ್ತಿರುವುದು ತಪ್ಪಿಲ್ಲ, ಮಿಸಲಾತಿ ಸೂಕ್ಷ್ಮ ವಿಚಾರವಾಗಿದ್ದು ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ತೀರ್ಮಾನಕ್ಕೆ ಬರುತ್ತೇವೆ. ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಅಲ್ಲಿನ ಸರ್ಕಾರ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಮಹಾರಾಷ್ಟ್ರ ಸರ್ಕಾರದ್ದು ಮನೆಯೊಂದು ಮೂರು ಬಾಗಿಲು, ಅವರಲ್ಲೇ ಒಮ್ಮತವಿಲ್ಲ ಎಂದು ಕಿಡಿಕಾರಿದರು.

ಗಡಿ ಕನ್ನಡ ಶಾಲೆ ಅಭಿವೃದ್ಧಿ:
ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಭಾಗದಲ್ಲಿ ಇರುವ ಕನ್ನಡ ಶಾಲೆಗಳನ್ನು ಸರ್ಕಾರ ಅಭಿವೃದ್ಧಿ ಪಡಿಸಲು ಸಿದ್ಧವಾಗಿದೆ. ಹಲವು ಶಾಲೆಗಳು ಹಿಂದೆ ಬಿದ್ದಿವೆ, ಅವುಗಳನ್ನು ಗುರುತಿಸಿ ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ತಳಿಸಿದರು.

ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ ಎಂದ ಸಿದ್ದರಾಮಯ್ಯ ಹೇಳಿಕೆ ಕುರಿತು ತಿರುಗೇಟು ಕೊಟ್ಟ ಸಚಿವರು ಕೊರೊನಾ ಬಂದ ನಂತರ ಹಣಕಾಸಿನ ವ್ಯವಹಾರದಲ್ಲಿ ಏರುಪೇರಾಗಿರುವುದು ನಿಜ. ಸಿದ್ದರಾಮಯ್ಯ ನಮ್ಮನ್ನು ಟೀಕೆ ಮಾಡ್ತಾನೆ ಇರ್ತಾರೆ. ಅವರು ಇರುವುದೆ ಟೀಕೆ ಮಾಡೋದಕ್ಕೆ ಹೊರತು ಮತ್ತೇನೂ ನಮ್ಮನ್ನು ಹೊಗಳ್ತಾರಾ ಎಂದು ಪ್ರಶ್ನಿಸಿ ಟಾಂಗ್ ನೀಡಿದರು.

Comments

Leave a Reply

Your email address will not be published. Required fields are marked *