ಶಿಶುವನ್ನು ಪ್ಲಾಸ್ಟಿಕ್ ಬ್ಯಾಗ್‍ನಲ್ಲಿ ಸುತ್ತಿ ಕಸದ ತೊಟ್ಟಿಯಲ್ಲಿ ಎಸೆದ ಅಪ್ರಾಪ್ತೆ!

– 60 ವರ್ಷದ ವ್ಯಕ್ತಿಯಿಂದ ಅತ್ಯಾಚಾರ
– ಪೊಲೀಸರ ಬಳಿ ಬಾಲಕಿಯ ತಾಯಿ ಹೇಳಿದ್ದೇನು?

ನವದೆಹಲಿ: ಅಪ್ರಾಪ್ತೆಯೊಬ್ಬಳು ಪ್ಲಾಸ್ಟಿಕ್ ಬ್ಯಾಗ್‍ನಲ್ಲಿ ಸುತ್ತಿ ಮಗುವನ್ನು ಕಸದ ತೊಟ್ಟಿಗೆ ಎಸೆದು ಹೋಗಿರುವ ಘಟನೆ ಉತ್ತರ ದೆಹಲಿಯ ಬುರಾರಿ ಪ್ರದೇಶದಲ್ಲಿ ನಡೆದಿದೆ.

ಅಕ್ಟೋಬರ್ 31 ರಂದು ಉತ್ತರ ದೆಹಲಿಯ ಬುರಾರಿಯಲ್ಲಿ ಕಸದ ತೊಟ್ಟಿಯಲ್ಲಿ ನವಜಾತ ಶಿಶುವೊಂದು ಸಿಕ್ಕಿತ್ತು. ಈ ಸಂಬಂಧ ತನಿಖೆ ನಡೆಸುತ್ತಿದ್ದಾಗ ದೆಹಲಿ ಪೊಲೀಸರಿಗೆ ಅತ್ಯಾಚಾರ ಪ್ರಕರಣವನ್ನು ಬಹಿರಂಗಪಡಿಸಲು ಸಾಧ್ಯವಾಗಿದೆ. ಮಗುವಿನ ತಾಯಿ ಅಪ್ರಾಪ್ತ ವಯಸ್ಸಿನ ಬಾಲಕಿ ಎಂದು ತಿಳಿದು ಬಂದಿದೆ.

ಆಗ ತಾನೇ ಜನಿಸಿದ ಮಗುವನ್ನು ಕಸದ ತೊಟ್ಟಿಯಲ್ಲಿ ಎಸೆದು ಹೋಗಿದ್ದಾರೆ ಎಂದು ಮಾಹಿತಿ ಸಿಕ್ಕ ಕೂಡಲೇ ಪೊಲೀಸರ ತಂಡ ಸ್ಥಳಕ್ಕೆ ಹೋಗಿ ಮಗುವನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಆರಂಭಿಸಿತ್ತು. ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಅಪ್ರಾಪ್ತ ಬಾಲಕಿಯು ಮಗುವನ್ನು ಎಸೆಯುತ್ತಿರುವುದನ್ನು ಗಮನಿಸಿದೆವು. ಬಾಲಕಿಯ ವಿಳಾಸವನ್ನು ಪತ್ತೆಹಚ್ಚಿ ವಿಚಾರಿಸಿದಾಗ, ಬಾಲಕಿಯ ಮನೆ ಹತ್ತಿರದ ಕಿರಾಣಿ ಅಂಗಡಿಯವನು ಅತ್ಯಾಚಾರ ನಡೆಸಿರುವುದು ಖಚಿತವಾಯಿತು. ಭಯದಿಂದ ಬಾಲಕಿ ಈ ಘಟನೆಯ ಬಗ್ಗೆ ತಾಯಿಗೆ ಹೇಳಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕಿರಾಣಿ ಅಂಗಡಿ ಮಾಲೀಕನಾಗಿರುವ 60 ವರ್ಷದ ವ್ಯಕ್ತಿ ನನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆರಂಭದಲ್ಲಿ ಆಕೆ ನನಗೆ ಗರ್ಭಿಣಿ ಎಂದು ತಿಳಿಯಲಿಲ್ಲ. ಕೆಲವು ದಿನಗಳ ನಂತರ ಈ ವಿಚಾರ ನನ್ನ ಗಮನಕ್ಕೆ ಬಂತು. ಅಂತೆಯೇ ಆಕೆ ಮನೆಯ ಛಾವಣಿಯ ಮೇಲೆ ಮಗುವಿಗೆ ಜನ್ಮ ನೀಡಿದಳು. ಇದರಿಂದ ಗಾಬರಿಗೊಂಡು ಜೀವಂತ ಮಗುವನ್ನು ಪ್ಲಾಸ್ಟಿಕ್ ಬ್ಯಾಗ್‍ನಲ್ಲಿ ಸುತ್ತಿ ಕಸದ ತೊಟ್ಟಿಗೆ ಎಸೆದೆವು ಎಂದು ಅಪ್ರಾಪ್ತೆ ಬಾಲಕಿಯ ತಾಯಿ ಪೊಲೀಸರ ಬಳಿ ಹೇಳಿದ್ದಾಳೆ.

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವ 60 ವರ್ಷದ ಅಂಗಡಿಯವನ ವಿರುದ್ಧ ಐಪಿಸಿ ಮತ್ತು ಪೊಕ್ಸೋ ಕಾಯ್ದೆಯ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆತನನ್ನು ಈಗಾಗಲೇ ಬಂಧಿಸಿದ್ದೇವೆ ಎಂದು ಡಿಸಿಪಿ ಆಂಟೊ ಅಲ್ಫೋನ್ಸ್ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *