ಶಿವಮೊಗ್ಗದಲ್ಲಿ ನಡೆಯಲಿದೆ ದಕ್ಷಿಣ ಭಾರತದ ಮೊದಲ ರೈತ ಮಹಾ ಪಂಚಾಯತ್

– ಮಾರ್ಚ್ 20ರಂದು ಕಾರ್ಯಕ್ರಮ ಆಯೋಜನೆ

ಶಿವಮೊಗ್ಗ: ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ 4 ತಿಂಗಳಿನಿಂದ ದೆಹಲಿಯ ಗಡಿ ಭಾಗದಲ್ಲಿ ಚಳಿ, ಗಾಳಿ, ಮಳೆ, ಬಿಸಿಲು ಲೆಕ್ಕಿಸದೇ ನೂರಾರು ರೈತರು ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟಕ್ಕೆ ಬೆಂಬಲವಾಗಿ ಇದೇ 20 ರಂದು ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ರೈತರ ಮಹಾ ಪಂಚಾಯತ್ ಸಮಾವೇಶ ನಡೆಯಲಿದೆ.

ಶಿವಮೊಗ್ಗದಲ್ಲಿ ನಡೆಯುವ ಈ ರೈತರ ಮಹಾ ಪಂಚಾಯತ್ ಸಮಾವೇಶದಲ್ಲಿ ದೆಹಲಿಯ ಹೋರಾಟನಿರತ ಕಿಸಾನ್ ಮೋರ್ಚಾದ ರಾಷ್ಟ್ರೀಯ ನಾಯಕರಾದ ರಾಕೇಶ್ ಸಿಂಗ್ ಟಿಕಾಯತ್, ಡಾ.ದರ್ಶನ್ ಪಾಲ್, ಯುದವೀರ್ ಸಿಂಗ್ ಭಾಗವಹಿಸಲಿದ್ದಾರೆ. ರೈತರ ಮಹಾ ಪಂಚಾಯತ್ ಹಿನ್ನೆಲೆಯಲ್ಲಿ ಈಗಾಗಲೇ ರೈತ ಸಂಘಟನೆ ಕಾರ್ಯಕರ್ತರು ಹಾಗೂ ಇತರೆ ಪಕ್ಷದವರು ಸಮಾವೇಶದಲ್ಲಿ ಭಾಗವಹಿಸುವಂತೆ ಸಾರ್ವಜನಿಕರಲ್ಲಿ, ರೈತರಲ್ಲಿ, ಗ್ರಾಮೀಣ ಭಾಗಗಳಲ್ಲಿ, ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರಿಗೆ ಹಾಗೂ ಕೃಷಿ ವ್ಯಾಪಾರಸ್ಥರಿಗೆ ಸಮಾವೇಶದ ಉದ್ದೇಶ ಕುರಿತು ಹಾಗೂ ಸಮಾವೇಶದಲ್ಲಿ ಭಾಗವಹಿಸುವಂತೆ ಮನವಿ ಮಾಡುತ್ತಿದ್ದಾರೆ.

ಹೇಳಿ ಕೇಳಿ ಶಿವಮೊಗ್ಗ ಜಿಲ್ಲೆ ಸಮಾಜವಾದಿ ಹೋರಾಟ ಹಿನ್ನೆಲೆ ಇರುವ ಭೂಮಿ. ಶಾಂತವೇರಿ ಗೋಪಾಲಗೌಡರು, ಕಡಿದಾಳು ಮಂಜಪ್ಪನವರು, ಕುವೆಂಪು, ಪಿ.ಲಂಕೇಶ್, ಯು.ಆರ್.ಅನಂತಮೂರ್ತಿ ಅವರಂತಹ ಮೊದಲಾದವರಂತಹ ಚಳುವಳಿ ಮತ್ತು ಸಾಹಿತ್ಯದ ದಿಗ್ಗಜರನ್ನು ನಾಡಿಗೆ ಕೊಡುಗೆ ಕೊಟ್ಟ ಜಿಲ್ಲೆ. ಸಮಾಜವಾದದ ಆಶಯಗಳನ್ನು ಉತ್ತಿದ, ಬಿತ್ತಿದ ಜಿಲ್ಲೆ. ಹೀಗಾಗಿ ಇಂತಹ ಹೆಗ್ಗಳಿಕೆ ಹೊಂದಿರುವ ಮಲೆನಾಡಿನ ತವರು ಶಿವಮೊಗ್ಗದಲ್ಲಿ ದಕ್ಷಿಣ ಭಾರತದ ಮೊದಲ ರೈತ ಮಹಾ ಪಂಚಾಯತ್ ನಡೆಯಲಿದ್ದು, ಕೇವಲ ಶಿವಮೊಗ್ಗ ಜಿಲ್ಲೆಯಷ್ಟೇ ಅಲ್ಲದೇ ಹೊರ ಜಿಲ್ಲೆಯ ರೈತರು ಸಹ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ.

Comments

Leave a Reply

Your email address will not be published. Required fields are marked *