– ಜಿಲ್ಲಾಧಿಕರಿಗಳ ಜೊತೆ ಸಿಎಂ ಸಭೆ
– ಮನೆ ಆರೈಕೆಯಲ್ಲಿರುವವರಿಗೆ ಟೆಲಿ ಮಾನಿಟರಿಂಗ್ ಮಾಡಿ
ಬೆಂಗಳೂರು: ಕೋವಿಡ್-19 ಸೋಂಕಿತರ ಪ್ರಥಮ ಮತ್ತು ದ್ವಿತೀಯ ಸಂಪರ್ಕಗಳನ್ನು ಪತ್ತೆ ಹಚ್ಚಿ, ಗುರಿಯಾಧಾರಿತ (ಟಾರ್ಗೆಟ್) ಪರೀಕ್ಷೆಗಳನ್ನು ಮಾಡಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಸಾಂಕ್ರಾಮಿಕ ರೋಗ ತಡೆ ಹಾಗೂ ಸಾವಿನ ಪ್ರಮಾಣ ತಡೆಯಲು ಹೆಚ್ಚಿನ ಮುತುವರ್ಜಿ ವಹಿಸಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸಿಎಂ ಅಧ್ಯಕ್ಷತೆಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗಿರುವ ಹತ್ತು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿ.ಇ.ಒಗಳೊಂದಿಗೆ ವೀಡಿಯೋ ಸಂವಾದ ನಡೆಸಿದರು. ಇದೇ ವೇಳೆ ಶಿವಮೊಗ್ಗ ಜಿಲ್ಲೆಯಲ್ಲಿ ಶೇ.20ರಷ್ಟಿದ್ದ ಕೋವಿಡ್ ಪ್ರಕರಣಗಳನ್ನು ಕಳೆದ ವಾರಗಳಲ್ಲಿ ಶೇ.6ಕ್ಕೆ ಇಳಿಸಲಾಗಿದೆ. ಇದನ್ನು ಇನ್ನಷ್ಟು ಕಡಿಮೆ ಮಾಡಿದಲ್ಲಿ ರಾಜ್ಯಕ್ಕೇ ಮಾದರಿಯಾಗಬಹುದು ಎಂದರು.

ಸಾಂಕ್ರಾಮಿಕ ರೋಗಕ್ಕೆ ಮಾಸ್ಕ್ ಧರಿಸುವುದು, ಸ್ಯಾನಿಟೈಸ್ ಮಾಡುವುದು ಮತ್ತು ಸಾಮಾಜಿಕ ಅಂತರವೇ ಮದ್ದು ಎಂಬುದನ್ನು ಜನರು ಅರಿಯಬೇಕು. ಮಾಸ್ಕ್ ಹಾಕದವರಿಗೆ ದಂಡ ವಿಧಿಸುವುದು ಅರಿವಿನ ಒಂದು ಭಾಗವೇ ಹೊರತು ಸರ್ಕಾರಕ್ಕೆ ಇದರಿಂದ ಬೇರೆ ಉದ್ದೇಶ ಇಲ್ಲ ಎಂಬುದನ್ನು ಜನತೆಗೆ ಮನಗಾಣಿಸಬೇಕು ಎಂದು ಅವರು ಅಧಿಕಾರಿಗಳನ್ನು ಉದ್ದೇಶಿಸಿ ಹೇಳಿದರು.
ಮುಖ್ಯಮಂತ್ರಿ @bsybjp ರವರ ಅಧ್ಯಕ್ಷತೆಯಲ್ಲಿ ಇಂದು, ಕೋವಿಡ್-19 ನಿಯಂತ್ರಣಕ್ಕೆ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ರಾಜ್ಯದ 10 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ ಜರುಗಿತು. (1/2) pic.twitter.com/g6JxDIkN7y
— CM of Karnataka (@CMofKarnataka) October 8, 2020
ಜನ ಜಾಗೃತಿ ಮುಖಾಂತರ ಮುನ್ನೆಚ್ಚರಿಕೆಯೊಂದಿಗೆ ರೋಗ ತಡೆಯಲು ಸೂಕ್ತ ಕ್ರಮಕೈಗೊಳ್ಳಬೇಕಿದೆ. ಈ ಸಂಬಂಧ ಅಗತ್ಯಗಳಿದ್ದರೆ ಹಿಂಜರಿಯದೆ ನೇರವಾಗಿ ಹೇಳಿ. ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ನೀಡಲು ಸರ್ಕಾರ ಬದ್ಧವಾಗಿದ್ದು, ಪಡೆದುಕೊಳ್ಳಲು ಈಗಾಗಲೇ ಸೂಚಿಸಲಾಗಿದೆ. ಕೋವಿಡ್-19 ಸಂಬಂಧಿಸಿದ ಎಸ್.ಒ.ಪಿಗಳನ್ನು ಪಾಲಿಸಿ, ಮರಣ ಪ್ರಮಾಣ ಹೆಚ್ಚದಂತೆ ಕಾಳಜಿವಹಿಸಿ ಎಂದರು.
ಕೋವಿಡ್ 19 ಪ್ರಕರಣಗಳು ಹೆಚ್ಚಾಗಿರುವ ಬಳ್ಳಾರಿ, ದಕ್ಷಿಣ ಕನ್ನಡ, ಹಾಸನ, ಧಾರವಾಡ, ಬೆಳಗಾವಿ, ಮೈಸೂರು, ಶಿವಮೊಗ್ಗ, ತುಮಕೂರು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಜಿಲ್ಲಾಧಿಕಾರಿಗಳು ತುಲನಾತ್ಮಕ ಅಧ್ಯಯನದೊಂದಿಗೆ ಕೋವಿಡ್-19 ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು. ಡೆತ್ ಆಡಿಟ್ ಬಗ್ಗೆ ಪರಿಶೀಲಿಸಿದ ಮುಖ್ಯ ಮಂತ್ರಿಗಳು ಧಾರವಾಡ ಜಿಲ್ಲೆಯಲ್ಲಿ ಮರಣ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ಒಂದು ವಿಶೇಷ ತಂಡವನ್ನು ಕಳುಹಿಸಲು ಸೂಚಿಸಿದರು.
ವೈದ್ಯಕೀಯ ಶಿಕ್ಷಣ ಸಚಿವ @mla_sudhakar, ಕಂದಾಯ ಸಚಿವ @RAshokaBJP, ಮೀನುಗಾರಿಕೆ ಮತ್ತು ಮುಜರಾಯಿ ಸಚಿವ @KotasBJP, ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. (2/2) pic.twitter.com/wmjv8KLr0v
— CM of Karnataka (@CMofKarnataka) October 8, 2020
ಜಿಲ್ಲೆಗಳಲ್ಲಿ ಆರ್.ಎ.ಟಿ ಪರೀಕ್ಷೆಗಳನ್ನು ಹೆಚ್ಚು ಮಾಡುತ್ತಿದ್ದು, ಇದನ್ನು ಕಡಿಮೆ ಮಾಡಿ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಗಳನ್ನು ಹೆಚ್ಚು ಮಾಡಬೇಕು. ಮನೆ ಆರೈಕೆಯಲ್ಲಿರುವವರಿಗೆ ಟೆಲಿ ಮಾನಿಟರಿಂಗ್ ಮುಖಾಂತರ ಆರೋಗ್ಯ ತಪಾಸಣೆಯನ್ನು ಕಾಲಕಾಲಕ್ಕೆ ಮಾಡಬೇಕು ಹಾಗೂ ಆರೋಗ್ಯ ಕಿಟ್‍ಗಳನ್ನು ನೀಡಬೇಕು. ಪಾಸಿಟಿವ್ ಪ್ರಕರಣಗಳನ್ನು ಕಡಿಮೆ ಮಾಡಲು ಸಮೀಕ್ಷೆ ಮಾಡಿ ತಪಾಸಣೆ ಕೈಗೊಳ್ಳಬೇಕು. ಆರ್.ಟಿ.ಪಿ.ಸಿ.ಆರ್ ಪರೀಕ್ಷೆಗಳನ್ನು ಹೆಚ್ಚು ಮಾಡಬೇಕು. ಅನಿವಾರ್ಯ ಇದ್ದಲ್ಲಿ ಮಾತ್ರ ಆರ್.ಎ.ಟಿ ಪರೀಕ್ಷೆ ಮಾಡಬೇಕೆಂದು ಸಿಎಂ ಸೂಚಿಸಿದರು.
ಆಸ್ಪತ್ರೆಗಳಲ್ಲಿ ದಾಖಲಾದ ನಂತರ 72 ಗಂಟೆಗಳೊಳಗೆ ಆಗಿರುವ ಮರಣಗಳ ಕಾರಣವನ್ನು ತಿಳಿಯಲು ಮರಣಗಳ ಆಡಿಟ್ ಮಾಡಬೇಕು. ರಾಜ್ಯದಲ್ಲಿ ಶೇ.50 ರಷ್ಟು ಮರಣಗಳು ಮೊದಲ 72 ಗಂಟೆಗಳಲ್ಲಿ ಆಗಿವೆ. ಹಾಗಾಗಿ ಪರೀಕ್ಷೆಗಳನ್ನು ಮಾಡಿ ಸೋಂಕು ಪತ್ತೆ ಹಚ್ಚುವುದು ಅತಿ ಮುಖ್ಯ. ಈ ಸಂಬಂಧ ಲೋಪಗಳನ್ನು ತಿದ್ದಿಕೊಂಡು ಎಲ್ಲರ ಸಹಕಾರದೊಂದಿಗೆ ರೋಗ ಪ್ರಮಾಣ ಮತ್ತು ಮರಣ ಪ್ರಮಾಣಕ್ಕೆ ಕಡಿವಾಣ ಹಾಕಲು ಸಭೆಯಲ್ಲಿ ಸೂಕ್ತ ನಿರ್ದೇಶನಗಳನ್ನು ಮುಖ್ಯಮಂತ್ರಿಗಳು ನೀಡಿದರು.

ಮೈಸೂರು ಜಿಲ್ಲೆಯಲ್ಲಿ ದಸರಾ ಹಬ್ಬವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಿದ್ದು, ಮುಂದಿನ ಒಂದು ವಾರದೊಳಗೆ ಪ್ರತ್ಯೇಕ ವರದಿಯನ್ನು ನೀಡಬೇಕು. ದಸರಾ ಕಾರ್ಯಕ್ರಮಗಳು ವರ್ಚುಯಲ್ ಆಗಿ ನಡೆಯಲಿ. ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಹರಡದಂತೆ ಎಚ್ಚರಿಕೆ ವಹಿಸಬೇಕು. ಕ್ಲಿನಿಕಲ್ ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್, ಮೀನುಗಾರಿಕೆ ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಂದಾಯ ಸಚಿವ ಆರ್.ಅಶೋಕ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ: ಇ.ವಿ.ರಮಣರೆಡ್ಡಿ, ಆರೋಗ್ಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply