ಶಿಲ್ಪಾ ನಾಗ್ ಒಳ್ಳೆಯ ಐಎಎಸ್ ಅಧಿಕಾರಿ- ಮೈಸೂರು ಪಾಲಿಕೆ ಆಯುಕ್ತೆ ಪರ ಈಶ್ವರಪ್ಪ ಬ್ಯಾಟ್

ಶಿವಮೊಗ್ಗ: ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಒಳ್ಳೆಯ ಐಎಎಸ್ ಅಧಿಕಾರಿ ಎಂದು ಹೇಳುವ ಮೂಲಕ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಪರ ಬ್ಯಾಟ್ ಬೀಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರಿನ ಡಿಸಿ ಹಾಗೂ ಕಮೀಷನರ್ ನಡುವೆ ಗೊಂದಲವಿದೆ. ಇಬ್ಬರ ನಡುವಿನ ಗೊಂದಲ ಬಹಿರಂಗವಾಗಿರುವುದನ್ನು ನಮ್ಮ ಸರ್ಕಾರ ಸಹಿಸಲ್ಲ. ಈ ಬಗ್ಗೆ ಕ್ಯಾಬಿನೆಟ್ ಸಭೆಯಲ್ಲಿ ಸಿಎಂ ಜೊತೆ ಚರ್ಚೆ ನಡೆಸಿ ಮುಂದಿನ ಕ್ರಮ ಜರುಗಿಸುತ್ತೇವೆ. ಕ್ಯಾಬಿನೆಟ್ ಸಭೆ ಯಾವಾಗ ನಡೆಯುತ್ತದೆ ಎಂಬ ಬಗ್ಗೆ ಇನ್ನು ಮಾಹಿತಿ ಇಲ್ಲ. ಕ್ಯಾಬಿನೆಟ್ ಸಭೆ ನಡೆಯುವ ಮೊದಲು ಇವರಿಬ್ಬರ ನಡುವಿನ ಸಮಸ್ಯೆ ಪರಿಹಾರ ಆಗದೆ ಹೋದಲ್ಲಿ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಯಾವುದೇ ಅಧಿಕಾರಿಗಳು ಬಹಿರಂಗವಾಗಿ ಹೇಳಿಕೆ ನೀಡುವುದು ಸರಿಯಲ್ಲ ಎಂದರು. ಇದನ್ನೂ ಓದಿ: 12 ಕೋಟಿ ಸಿಎಸ್‍ಆರ್ ಫಂಡ್ ಖರ್ಚಿನ ಮಾಹಿತಿ ಕೇಳಿದ್ದೆ ಅಷ್ಟೇ – ರೋಹಿಣಿ ಸಿಂಧೂರಿ

ರೋಹಿಣಿ ಸಿಂಧೂರಿ ಅವರು ನಮ್ಮ ಇಲಾಖೆಯಲ್ಲಿ ಕೆಲಸ ಮಾಡಿಲ್ಲ ಹೀಗಾಗಿ ಅವರ ಬಗ್ಗೆ ನನಗೆ ಗೊತ್ತಿಲ್ಲ. ಶಿಲ್ಪಾ ನಾಗ್ ಮೊನ್ನೆಯವರೆಗೂ ನಮ್ಮ ಇಲಾಖೆಯಲ್ಲಿ ಕೆಲಸ ಮಾಡಿದ್ದಾರೆ. ಇಲಾಖೆಯಲ್ಲಿ ಇರುವಷ್ಟು ದಿನ ಶಿಲ್ಪಾ ನಾಗ್ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ ಈ ಘಟನೆ ಹೇಗೆ ನಡೆಯಿತು ಎಂದು ನನಗೆ ಗೂತ್ತಿಲ್ಲ. ಈ ರೀತಿ ಬಹಿರಂಗವಾಗಿ ಸುದ್ದಿಗೋಷ್ಠಿ ನಡೆಸುವಷ್ಟು ಯಾಕೆ ಅತಿರೇಕಕ್ಕೆ ಹೋಯ್ತು ಅಂತಾನು ಗೂತ್ತಿಲ್ಲ. ಈ ಕುರಿತು ಮುಖ್ಯ ಕಾರ್ಯದರ್ಶಿಯವರು ಮೈಸೂರಿಗೆ ಭೇಟಿ ನೀಡಿ ಇಬ್ಬರ ಜೊತೆ ಚರ್ಚೆ ನಡೆಸಿದ್ದಾರೆ. ಅವರು ಏನು ವರದಿ ನೀಡುತ್ತಾರೆ, ಸಿಎಂ ಕ್ರಮ ತೆಗೆದುಕೊಳ್ಳುತ್ತಾರೋ ಅಥವಾ ಸಚಿವ ಸಂಪುಟದಲ್ಲಿ ಚರ್ಚಿಸಿ ಕ್ರಮ ತೆಗೆದುಕೊಳ್ಳುತ್ತಾರೋ ನೋಡಬೇಕು ಎಂದರು.

ಡಿಸಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಎಂಪಿ ಸೇರಿದಂತೆ ಎಲ್ಲ ಪಕ್ಷದ ಶಾಸಕರು ಸ್ಥಳೀಯ ಜನಪ್ರತಿನಿಧಿಗಳು ಸಹ ಆರೋಪ ಮಾಡಿದ್ದಾರೆ. ಡಿಸಿ ಬಗ್ಗೆ ನನಗೆ ಗೂತ್ತಿಲ್ಲ, ಆದರೆ ಶಿಲ್ಪಾ ನಾಗ್ ಬಗ್ಗೆ ನನಗೆ ಗೊತ್ತು. ಸಿಎಂ ತೆಗೆದುಕೊಳ್ಳುವ ನಿರ್ಧಾರಕ್ಕೆ ನನ್ನ ಸಹಮತವಿದೆ ಎಂದರು.

Comments

Leave a Reply

Your email address will not be published. Required fields are marked *