ಮೈಸೂರು: ನನ್ನ ರಾಜೀನಾಮೆಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಿರುಕುಳ ಕಾರಣ ಎಂದು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರು ರಾಜೀನಾಮೆ ನೀಡಿದ್ದು, ಈ ಕುರಿತು ಭಾರೀ ಚರ್ಚೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಇದೀಗ ಸ್ವತಃ ರೋಹಿಣಿ ಸಿಂಧೂರಿ ಅವರು ಪ್ರತಿಕ್ರಿಯಿಸಿದ್ದು, ಶಿಲ್ಪಾ ನಾಗ್ ಅವರು ಸುಳ್ಳು ಹೇಳಿದ್ದಾರೆ, ಆರೋಪಗಳು ನಿರಾಧಾರ ಎಂದು ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ನಾನು ಕಿರುಕುಳ ನೀಡಿದ್ದೇನೆ ಎಂದು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರು ಸುಳ್ಳು ಹೇಳಿದ್ದಾರೆ. ಅಲ್ಲದೆ ಯಾವ ರೀತಿಯ ಕಿರುಕುಳ ಎಂಬುದನ್ನು ಸಹ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿಲ್ಲ ಎಂದಿದ್ದಾರೆ.

ಜಿಲ್ಲಾಧಿಕಾರಿಯಾಗಿ ಕೊರೊನಾ ಸಾಂಕ್ರಾಮಿಕ ರೋಗವನ್ನು ನಿರ್ವಹಿಸುವ ಕೆಲಸದಲ್ಲಿ ಹಾಗೂ ನಿಯಂತ್ರಿಸುವ ಸಂದರ್ಭದಲ್ಲಿ ನನ್ನ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ. ನನ್ನ ಗುರಿ ಹಾಗೂ ಕ್ರಮಗಳು ಕೊರೊನಾ ನಿರ್ವಹಣೆಗಾಗಿ ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ.
ಶಿಲ್ಪಾ ನಾಗ್ ಕುರಿತು ಪ್ರತ್ಯಾರೋವನ್ನೂ ಮಾಡಿರುವ ಡಿಸಿ ರೋಹಿಣಿ ಸಿಂಧೂರಿ, ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರು ಕೊರೊನಾ ನಿರ್ವಹಣೆ ಕುರಿತು ಸಭೆಯಲ್ಲಿ ಭಾಗವಹಿಸಿಲ್ಲ. ವಾರ್ಡ್ವಾರು ಕೊರೊನಾ ಹೊಸ ಪ್ರಕರಣಗಳು, ಸಾವು ಹಾಗೂ ಸಕ್ರಿಯ ಪ್ರಕರಣಗಳ ಅಂಕಿ ಸಂಶಗಳನ್ನು ತಪ್ಪಾಗಿ ಹಾಗೂ ಸಹಿ ಮಾಡದೆ ನೀಡಿದ್ದಾರೆ. ಹೀಗಾಗಿ ಈ ಅಂಕಿ ಅಂಶಗಳನ್ನು ಸರಿ ಪಡಿಸುವಂತೆ ನಾನು ಆದೇಶಿಸಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಸರ್ಕಾರಿ ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆಯುವಂತೆ ಆದೇಶಿಸಿದ್ದೆ. ಆದರೆ ಈ ವರೆಗೆ ಒಂದೇ ಒಂದು ಕೋವಿಡ್ ಕೇರ್ ಸೆಂಟರ್ ತೆರೆದಿಲ್ಲ. ನಾವು ತಾಲೂಕು ಹಾಗೂ ಗ್ರಾಮೀಣ ಭಾಗಗಳಲ್ಲಿ ಕಳೆದ 20 ದಿನಗಳಲ್ಲಿ 18 ಕೋವಿಡ್ ಕೇರ್ ಸೆಂಟರ್ ತೆರೆದಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಸ್ವತಃ ನಾನೇ ಇತ್ತೀಚೆಗೆ ನಗರದಲ್ಲಿ 3 ಕೋವಿಡ್ ಕೇರ್ ಸೆಂಟರ್ಗಳನ್ನು ತೆರೆದಿದ್ದೇನೆ. ಕಿರುಕುಳ ನೀಡುವ ಉದ್ದೇಶದಿಂದ ಇವುಗಳನ್ನು ಮಾಡಿಲ್ಲ ಎಂದು ವಿವರಿಸಿದ್ದಾರೆ.
ಇಡೀ ಜಿಲ್ಲೆಯ ಖಾಸಗಿ ಕೈಗಾರಿಕೆಗಳು, ಫ್ಯಾಕ್ಟರಿಗಳು ಹಾಗೂ ಐಟಿ ಕಂಪನಿಗಳಿಂದ ಬರುವ ಸಿಎಸ್ಆರ್ ಫಂಡ್ನ ಇನ್ಚಾರ್ಜ್ ಆಗಿ ಶಿಲ್ಪಾ ನಾಗ್ ಅವರನ್ನು ನೇಮಿಸಲಾಗಿತ್ತು. ಈ ಎಲ್ಲ ಸಿಎಸ್ಆರ್ ಫಂಡ್ನ್ನು ಶಿಲ್ಪಾ ನಾಗ್ ಅವರು ಮೈಸೂರು ನಗರಕ್ಕೇ ವ್ಯಯಿಸಿರುವುದಾಗಿ ನನಗೆ ತಿಳಿಸಿದರು. ಬಳಿಕ ಜೂ.1ರಂದು ಇದರ ಸಂಪೂರ್ಣ ಹಾಗೂ ಸರಿಯಾದ ಲೆಕ್ಕ ನೀಡುವಂತೆ ಪತ್ರದ ಮೂಲಕ ಕೇಳಿದೆ. ಪತ್ರಕ್ಕೆ ಈ ವರೆಗೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅಲ್ಲದೆ ತಾಲೂಕು ಹಾಗೂ ಗ್ರಾಮೀಣ ಭಾಗಕ್ಕೆ ಒಂದು ರೂಪಾಯಿಯನ್ನೂ ನೀಡದೇ ಎಲ್ಲ ಹಣವನ್ನು ನಗರಕ್ಕೆ ವ್ಯಯಿಸಿರುವುದು ಸಮಂಜಸ ಹಾಗೂ ಸರಿಯಾದ ಕ್ರಮ ಅಲ್ಲ. ಸಿಎಸ್ಆರ್ ಫಂಡ್ ಖರ್ಚು ಮಾಡಿರುವ ಶಿಲ್ಪಾ ನಾಗ್ ಅವರ ಲೆಕ್ಕಕ್ಕಾಗಿ ಇನ್ನೂ ಕಾಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಕಳೆದ 10 ದಿನಗಳಿಂದ ಜಿಲ್ಲಾಡಳಿತದ ವಿರುದ್ಧ ಶಿಲ್ಪಾ ನಾಗ್ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿರುವುದು ಎಲ್ಲರಿಗೂ ತಿಳಿದಿದೆ. ಮೈಸೂರು ಮಹಾನಗರ ಪಾಲಿಕೆ ಆಯುಕ್ತರಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಅಲ್ಲದೆ ಅವರ ಆರೋಪಗಳೆಲ್ಲವೂ ಸುಳ್ಳು, ನೈಜ ಸಂಗತಿಗಳಿಗೆ ವಿರುದ್ಧವಾಗಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Leave a Reply