ಶಿರಾ ರಣಕಣದಲ್ಲಿ ಇಂದು ಘಟಾನುಘಟಿಗಳ ಪ್ರಚಾರ- ರಾಜಹುಲಿ, ದಳಪತಿಯಿಂದ ಭರ್ಜರಿ ಮತಬೇಟೆ

ತುಮಕೂರು: ಶಿರಾ ಉಪ ಚುನಾವಣಾ ಅಖಾಡ ಅಕ್ಷರಶಃ ಇಂದು ರಂಗೇರಲಿದೆ. ಹಾಲಿ, ಮಾಜಿ ಸಿಎಂಗಳ ಅಬ್ಬರದ ಪ್ರಚಾರ ನಡೆಯಲಿದೆ. ಈ ಮಧ್ಯೆ ರೇಣುಕಾರ್ಚಾಯ ಮತ್ತೆ ಎಡವಟ್ಟು ಮಾಡಿಕೊಂಡಿದ್ದಾರೆ.

ಶಿರಾ ಬೈ ಎಲೆಕ್ಷನ್ ಬಿಜೆಪಿಗೆ ಪ್ರತಿಷ್ಠೆಯಾದ್ರೆ, ಜೆಡಿಎಸ್‍ಗೆ ತಮ್ಮ ಕ್ಷೇತ್ರವನ್ನು ಉಳಿಸಿಕೊಳ್ಳುವ ಹಠ. ಹೀಗಾಗಿ ಉಪಕದನ ಪ್ರಚಾರ ಕಣ ರಾಜ್ಯದ ಘಟಾನುಘಟಿ ನಾಯಕರಿಂದ ತುಂಬಿ ಹೋಗಿದೆ. ಇಂದು ಬಿಜೆಪಿ ಅಭ್ಯರ್ಥಿ ರಾಜೇಶ್‍ಗೌಡ ಪರ ಸಿಎಂ ಯಡಿಯೂರಪ್ಪ ಮತಬೇಟೆಗಿಳಿಯಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಮದಲೂರು ಗ್ರಾಮದಲ್ಲಿ ಸಿಎಂ ಬೃಹತ್ ಸಮಾವೇಶದಲ್ಲಿ ನಡೆಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಶಿರಾ ನಗರದಲ್ಲಿ ಬಿಎಸ್‍ವೈ ರ್ಯಾಲಿ ನಡೆಸಲಿದ್ದಾರೆ. ಆ ಮೂಲಕ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಪರ ಮತಯಾಚಿಸಲಿದ್ದಾರೆ. ಅಷ್ಟಕ್ಕೂ ಶಿರಾದಲ್ಲಿ ಬಿಎಸ್‍ವೈ ಭರ್ಜರಿ ಪ್ರಚಾರ ನಡೆಸುತ್ತಿರುವ ಹಿಂದೆ ಇರುವ ಅಸಲಿ ಕಾರಣವೇ ಬೇರೆ ಇದೆ.

ಸಿಎಂ ಅವರು ಈಗಾಗಲೇ ಆರ್.ಆರ್ ನಗರ, ಶಿರಾ ರಿಪೋರ್ಟ್ ತರಿಸಿಕೊಂಡಿದ್ದಾರೆ. ಹೀಗಾಗಿ ಸಿಎಂ ಕೈನಲ್ಲಿ 2 ಕ್ಷೇತ್ರಗಳ ಗುಪ್ತಚರ ಇಲಾಖೆ ವರದಿ ಇದೆ. ಪಕ್ಷದ ಆಂತರಿಕ ವರದಿ, ಖಾಸಗಿ ವರದಿಯನ್ನೂ ತರಿಸಿಕೊಂಡಿದ್ದಾರೆ. ಶಿರಾದಲ್ಲಿ ಬಿಜೆಪಿಗೆ ಅಲ್ಪ ಹಿನ್ನಡೆ ಇದೆ ಎಂದು ವರದಿಗಳು ತಿಳಿಸಿವೆ. ಶಿರಾದಲ್ಲಿ ಲಿಂಗಾಯತ, ಗೊಲ್ಲ ಸಮುದಾಯಗಳ ಮತಬ್ಯಾಂಕ್ ಬಗ್ಗೆ ಚಿಂತೆಯಿಲ್ಲ. ಒಕ್ಕಲಿಗ ಹಾಗೂ ಅಹಿಂದ ವರ್ಗಗಳ ಮತಗಳ ಬಗ್ಗೆ ಸಿಎಂಗೆ ಆತಂಕ ಇದೆ. ಹೀಗಾಗಿ ಅಲ್ಪಸಂಖ್ಯಾತರು ಹಾಗೂ ಅಹಿಂದ ಮತ ಸೆಳೆಯಲು ಸಿಎಂ ಪ್ಲಾನ್ ರೂಪಿಸಿದ್ದಾರೆ. ಶಿರಾದಲ್ಲಿ ಗೆಲುವಿಗೆ ರಣತಂತ್ರ ರೂಪಿಸಿ ಅದರಂತೆ ಸಿಎಂ ಪ್ರಚಾರ ನಡೆಸಲಿದ್ದಾರೆ.

ಇತ್ತ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ, ಎಚ್.ಡಿ ದೇವೇಗೌಡ, ಪ್ರಜ್ವಲ್ ರೇವಣ್ಣ ತಮ್ಮ ಅಭ್ಯರ್ಥಿ ಅಮ್ಮಾಜಮ್ಮ ಪರ ಇಂದು ಶಿರಾದಲ್ಲಿ ಪ್ರಚಾರ ನಡೆಸಲಿದ್ದಾರೆ. ಆ ಮೂಲಕ ಶಿರಾ ಕ್ಷೇತ್ರದಲ್ಲಿ ಇಂದು ಸಿಎಂ, ಮಾಜಿ ಸಿಎಂ, ಮಾಜಿ ಪ್ರಧಾನಿಯ ಅಬ್ಬರ ಕಂಡುಬರಲಿದೆ.

ಶಿರಾದಲ್ಲಿ ಚುನಾವಣಾ ಪ್ರಚಾರದ ವೇಳೆ ರೇಣುಕಾಚಾರ್ಯ ಎಡವಟ್ಟು ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಬಳಿಯೇ ಹೋಗಿ ಬಿಜೆಪಿ ಪರ ಮತಯಾಚಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಗೆಲ್ಲೋಕೆ ಬಿಡಲ್ಲ ಅಂತ ಕೂಗಿ ಟಾಂಗ್ ಕೊಟ್ರು. ಕಕ್ಕಾಬಿಕ್ಕಿಯಾದ ರೇಣುಕಾಚಾರ್ಯ ಸಾವರಿಸಿಕೊಂಡು 10ನೇ ತಾರೀಕು ಸಿಗೋಣ ಅಂತಾ ನಿರ್ಗಮಿಸಿದ ಪ್ರಸಂಗ ನಡೆಯಿತು.

Comments

Leave a Reply

Your email address will not be published. Required fields are marked *