ಶಾಸಕರನ್ನು ರೆಸಾರ್ಟ್‍ಗೆ ಶಿಫ್ಟ್ ಮಾಡಿ ಬಾಗಿಲು ತೆರೆದಿದೆ ಎಂದ ಕಾಂಗ್ರೆಸ್

-ಪೈಲಟ್ ಮನವೊಲಿಸಲು ಹಿರಿಯ ನಾಯಕರ ಯತ್ನ

ಜೈಪುರ: ರಾಜಸ್ಥಾನದ ರಾಜಕೀಯದ ಬಿಕ್ಕಟ್ಟು ಮುಂದುವರಿದಿದ್ದು, ಸೋಮವಾರವಷ್ಟೇ ರಾಜಸ್ಥಾನ ಕಾಂಗ್ರೆಸ್ ಪಕ್ಷ ತನ್ನ ಶಾಸಕಾಂಗ ಸಭೆ ನಡೆಸಿ ಬಳಿಕ ಶಾಸಕರನ್ನು ರೆಸಾರ್ಟ್‍ಗೆ ಶಿಫ್ಟ್ ಮಾಡಿತ್ತು. ಆದರೆ ಸಿಎಂ ಅಶೋಕ್ ಗೆಹ್ಲೋಟ್ ವಿರುದ್ಧ ಬಂಡಾಯದ ಭಾವುಟ ಹರಿಸಿರುವ ಸಚಿನ್ ಪೈಲಟ್‍ಗೆ ಇನ್ನು ಪಕ್ಷದ ಬಾಗಿಲುಗಳು ತೆರೆದಿದೆ ಎಂದು ರಾಜಸ್ಥಾನ ಕಾಂಗ್ರೆಸ್ ಉಸ್ತುವಾರಿ ಅವಿನಾಶ್ ಪಾಂಡೆ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಸಚಿನ್ ಪೈಲಟ್ ಅವರೊಂದಿಗೆ ಮಾತುಕತೆ ನಡೆಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಸದ್ಯ ಲಭಿಸಿದೆ. ಇದಕ್ಕೆ ಪೂರಕ ಎಂಬಂತೇ ಅವಿನಾಶ್ ಪಾಂಡೆ ಕೂಡ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, ಅಹ್ಮದ್ ಪಟೇಲ್‍ರಂತಹ ನಾಯಕರು ಸಚಿನ್ ಪೈಲಟ್‍ರೊಂದಿಗೆ ರಾಜಿ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.

ಇತ್ತ ಕಾಂಗ್ರೆಸ್ ಶಾಸಕಾಂಗ ಸಭೆಗೆ ಗೈರಾಗಿದ್ದ 18 ಶಾಸಕರಿಗೆ ನೋಟಿಸ್ ನೀಡಲಾಗಿದ್ದು, 2 ದಿನಗಳ ಒಳಗೆ ಶಾಸಕರು ನೋಟಿಸ್‍ಗೆ ಉತ್ತರಿಸಿಬೇಕು ಎಂದು ತಿಳಿಸಿದ್ದು, ಇಲ್ಲವಾದರೆ ಅನರ್ಹತೆ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ. ಕೆಲ ಶಾಸಕರು ನಿವಾಸದಲ್ಲಿ ಇಲ್ಲದ ಕಾರಣ ಅವರ ನಿವಾಸಗಳ ಗೋಡೆಗೆ ನೋಟಿಸ್ ಅಂಟಿಸಲಾಗಿದೆ. ಈಗಾಗಲೇ ಕಾಂಗ್ರೆಸ್ ನಾಯಕರು ಸಭೆಗೆ ಗೈರಾಗಿದ್ದ ಶಾಸಕರ ವಿರುದ್ಧ ಕ್ರಮಕೈಗೊಳ್ಳಲು ಸ್ಪೀಕರ್‍ಗೆ ಮನವಿ ಸಲ್ಲಿಸಿದೆ. ಮುಂದಿನ ಎರಡು ದಿನಗಳಲ್ಲಿ ಶಾಸಕರು ಸಭೆಗೆ ಗೈರಾದ ಬಗ್ಗೆ ವಿವರಣೆ ನೀಡದಿದ್ದರೆ ಸಿಎಲ್‍ಪಿಗೆ ರಾಜೀನಾಮೆ ನೀಡಿರುವುದಾಗಿ ಪರಿಗಣಿಸಲಾಗುತ್ತದ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅವಿನಾಷ್ ಪಾಂಡೆ ತಿಳಿಸಿದ್ದಾರೆ.

ಇತ್ತ ಪಕ್ಷದಲ್ಲಿ ಉಂಟಾಗಿರುವ ಬಂಡಾಯದ ಕಾರಣ ಬಿಜೆಪಿ ಅಧ್ಯಕ್ಷ ಸತೀಶ್ ಪುನಿಯಾ ಪಕ್ಷದ ಹಿರಿಯ ನಾಯಕರೊಂದಿಗೆ ಜೈಪುರದಲ್ಲಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಪೈಲಟ್ ಬಂಡಾಯದ ಕಾರಣದ ಉಂಟಾಗಿರುವ ರಾಜಕೀಯ ಪರಿಣಾಮಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಅಲ್ಲದೇ ಸದ್ಯದ ಸ್ಥಿತಿಯಲ್ಲಿ ಅಶೋಕ್ ಗೆಹ್ಲೋಟ್ ಸದನದಲ್ಲಿ ಬಹುಮತ ಸಾಬೀತು ಪಡಿಸಬೇಕು ಎಂದು ಭಾವಿಸುತ್ತಿಲ್ಲ. ಅಂತಹ ಸಂದರ್ಭ ಎದುರಾದರೆ ಬಿಜೆಪಿ ಖಂಡಿತ ಬಹುಮತ ಸಾಬೀತು ಮಾಡಲು ಡಿಮಾಂಡ್ ಮಾಡಲಿದೆ ಎಂದು ವಿರೋಧ ಪಕ್ಷದ ನಾಯಕ ಗುಲಾಬ್ ಚಂದ್ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *