ಶಾಲೆ ಜೊತೆ ಮಧ್ಯಾಹ್ನದ ಬಿಸಿಯೂಟವೂ ಬಂದ್- ಧಾರವಾಡದಲ್ಲಿ ಭಿಕ್ಷೆ ಬೇಡ್ತಿದ್ದಾರೆ ಮಕ್ಕಳು

ಧಾರವಾಡ: ಒಂದು ಕಡೆ ಬಡವರ ಪರ ಸರ್ಕಾರ ಎಂದು ಹೇಳಿಕೊಳ್ಳುತ್ತೆ. ಆದರೆ ಅದೇ ಬಡವರಿಗೆ ಒಂದು ಹೊತ್ತಿನ ಅನ್ನ ಹಾಕೋಕೆ ಆಗ್ತಿಲ್ಲ. ಹೀಗಾಗಿ ಬಡ ಮಕ್ಕಳು ಈಗ ಬೀದಿಯಲ್ಲಿ ಭಿಕ್ಷೆಗೆ ಇಳಿದು ಬಿಟ್ಟಿದ್ದಾರೆ.

ಹೌದು. ವಿದ್ಯಾಕಾಶಿ ಎಂದು ಕರೆಸಿಕೊಳ್ಳುವ ಧಾರವಾಡ ನಗರದಲ್ಲಿ ಹೆಚ್ಚಿನ ವಿದ್ಯಾವಂತರು, ಬುದ್ಧಿವಂತರು ಇದ್ದಾರೆ ಎಂದು ಹೇಳ್ತಾರೆ. ಆದರೆ ಅದೇ ಧಾರವಾಡದಲ್ಲಿ ಈಗ ಮಕ್ಕಳು ಹಸಿವು ನೀಗಿಸಿಕೊಳ್ಳಲು ಎಲ್ಲಿ ನೋಡಿದ್ರಲ್ಲಿ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ತಿದ್ದಾರೆ. ಧಾರವಾಡ ನಗರದಲ್ಲಿ ಕೆಲ ಪೋಷಕರೇ ತಮ್ಮ ಮಕ್ಕಳನ್ನ ಭಿಕ್ಷೆ ಬೇಡಲು ಮಾರುಕಟ್ಟೆಯಲ್ಲಿ ತೆಗೆದುಕೊಂಡು ಬಂದಿದ್ರೆ, ಇನ್ನೂ ಕೆಲವು ಮಕ್ಕಳು ತಮ್ಮ ಮನೆಯಲ್ಲೇ ಗೊತ್ತಿಲ್ಲದಂತೆ ಬಂದು ಭಿಕ್ಷೆ ಬೇಡುತ್ತಿದ್ದಾರೆ. ಧಾರವಾಡದಲ್ಲಿ ಪಬ್ಲಿಕ್ ಟಿವಿ ನಡೆಸಿದ ರಿಯಾಲಿಟಿ ಚೆಕ್‍ನಲ್ಲಿ ಹಳ್ಳಿಯಿಂದ ಬಂದಿದ್ದ ಮೂರನೇ ತರಗತಿ ಬಾಲಕಿಯೊಬ್ಬಳು, ತಾಯಿಗೆ ಹುಷಾರಿಲ್ಲ. ಅದಕ್ಕೆ ನಾನು ಕಾಯಿಪಲ್ಲೆ ತರಲು ಬಂದಿದ್ದೆ ಎಂದು ಸುಳ್ಳು ಹೇಳಿದ್ದಾಳೆ.

ಮತ್ತೊಂದು ಕಡೆ ನಗರದ ಕಂಠಿ ಗಲ್ಲಿ ಬಳಿ ಇರುವ ಜೋಪಡಿಯ ಮಕ್ಕಳಂತೂ ಪ್ರತಿ ದಿನ ಇದೇ ನಗರದ ಮಾರುಕಟ್ಟೆಯಲ್ಲಿ ಭಿಕ್ಷೆ ಬೇಡುತ್ತಿರುವ ದೃಶ್ಯ ಸಾಮಾನ್ಯವಾಗಿವೆ. ಈ ಮಕ್ಕಳ ಪೋಷಕರನ್ನು ಕೇಳಿದ್ರೆ, ಮಕ್ಕಳು ಹಸಿವು ನೀಗಿಸಲು ಭಿಕ್ಷೆ ಬೇಡುತ್ತಿದ್ದಾರೆ, ನಾವು ದುಡಿಯೊಕೆ ಹೊದಾಗ ಎಲ್ಲಿಯಾದ್ರೂ ಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಸರ್ಕಾರ ಇದೇ ಬಿಸಿಯೂಟ ಆರಂಭಿಸಿದ್ರೆ, ಮಕ್ಕಳು ಶಾಲೆಯಲ್ಲಿ ಊಟ ಮಾಡಿ ಬರುತ್ತಿದ್ದವು. ಆದರೆ ಈಗ ಊಟ ಇಲ್ಲದೇ ಭಿಕ್ಷೆ ಬೇಡುವಂತೆ ಆಗಿದೆ ಎಂದು ಹೇಳುತ್ತಾರೆ.

ಒಟ್ಟಿನಲ್ಲಿ ಸರ್ಕಾರದ ಬಿಸಿಯೂಟ ಇಲ್ಲದೇ ಮಕ್ಕಳು ಬೀದಿಗೆ ಬಂದು ಭಿಕ್ಷೆ ಬೇಡಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವಂತೆ ಆಗಿದೆ. ಆದರೆ ಸರ್ಕಾರ ಈ ಮಕ್ಕಳನ್ನ ಭಿಕ್ಷೆ ಬೇಡುವುದರಿಂದ ದೂರ ಉಳಿಸಬೇಕಾಗಿದೆ.

Comments

Leave a Reply

Your email address will not be published. Required fields are marked *