ಶವ ಸಾಗಣೆಗೆ ಅಂಬುಲೆನ್ಸ್‌ನಿಂದ 60 ಸಾವಿರ ಡಿಮ್ಯಾಂಡ್- ಮಾಂಗಲ್ಯ ಮಾರಿ ಹಣ ನೀಡಲು ಮುಂದಾದ ಮಗಳು

– ಹೆಬ್ಬಾಳದಿಂದ ಪೀಣ್ಯಕ್ಕೆ ತರಲು 60 ಸಾವಿರ ಚಾರ್ಜ್

ಬೆಂಗಳೂರು: ಕೊರೊನಾ ವಕ್ಕರಿಸಿದರೆ ಟೆಸ್ಟ್ ಹಾಗೂ ಟ್ರೀಟ್‍ಮೆಂಟ್‍ಗೆ ಕ್ಯೂ ಹಾಗೂ ಸಾವಿರಾರು ರೂ. ಹಣ ಸುರಿಯಬೇಕು, ಸತ್ತ ಮೇಲಾದರೂ ಸುಗಮ ಅಂತ್ಯಸಂಸ್ಕಾರ ಆಗುತ್ತೆ ಎಂದರೆ ಅದೂ ಇಲ್ಲ. ಹೀಗಾಗಿ ಬದುಕಿದ್ದಾಗ ಬೆಡ್ ಪ್ರಾಬ್ಲಂ, ಸತ್ತಾಗ ಅಂತ್ಯ ಸಂಸ್ಕಾರದ ಪ್ರಾಬ್ಲಂ ಎನ್ನುವಂತಾಗಿದೆ.

ನಗರದ ಹೆಬ್ಬಾಳದಿಂದ ಪೀಣ್ಯಕ್ಕೆ ಹೆಣ ಸಾಗಾಟ ಮಾಡಲು ಹಣಕ್ಕೆ ಡಿಮ್ಯಾಂಡ್ ಇಟ್ಟಿರುವ ಮನಕಲುಕುವ ಘಟನೆಯೊಂದು ನಡೆದಿದ್ದು, ಶವ ಸಾಗಾಟಕ್ಕೆ ಬರೋಬ್ಬರಿ 60 ಸಾವಿರ ರೂ. ಹಣ ಡಿಮ್ಯಾಂಡ್ ಮಾಡಲಾಗಿದೆ. ಹಣ ನೀಡದಿದ್ದರೆ ಬೀದಿಯಲ್ಲೇ ಹೆಣ ಬಿಸಾಡುತ್ತೇವೆ ಎಂದು ಹೇಳಿದ್ದಾರೆ. ಈ ವೇಳೆ ಮಾಂಗಲ್ಯ ಮಾರಿ ಹಣ ನೀಡಲು ಮಗಳು ಮುಂದಾಗಿದ್ದಾರೆ. ಶವ ಪ್ಯಾಕೇಜ್ ಚಾಪ್ಟರ್- 2 ಕಹಾನಿ ಇದಾಗಿದ್ದು, ಅಂಬುಲೆನ್ಸ್ ಗಳ ಧನದಾಹ ಇನ್ನೂ ನಿಂತಿಲ್ಲ. ಸರ್ಕಾರ ಎಚ್ಚರಿಕೆ ಕೊಟ್ಟರೂ ಡೋಂಟ್‍ಕೇರ್ ಎಂದು ಅಂಬುಲೆನ್ಸ್ ನಲ್ಲಿ ಹೆಣ ಇಟ್ಟುಕೊಂಡು ಧನಪಿಶಾಚಿಗಳು ಹಣಕ್ಕೆ ಪೀಡಿಸುತ್ತಿದ್ದಾರೆ.

ನಡು ರಸ್ತೆಯಲ್ಲಿ ಅಂಬುಲೆನ್ಸ್ ನಿಲ್ಲಿಸಿ 3,000 ರೂ. ನೀಡಿ ಎಂದು ಆವಾಜ್ ಹಾಕಿದರು. ಉಳಿದ ಹಣವನ್ನು ಬೆಳಗ್ಗೆ ನೀಡುತ್ತೇವೆ. ಇಲ್ಲವೇ ನನ್ನ ಬಳಿ ಒಡವೆ ಇದೆ. ಇದನ್ನಾದರೂ ತೆಗೆದುಕೊಂಡು ದಯವಿಟ್ಟು ಅಂತ್ಯಸಂಸ್ಕಾರಕ್ಕೆ ನೆರವು ಮಾಡಿಕೊಡಿ ಎಂದು ಬೇಡಿಕೊಂಡೆವು. ಆದರೂ ಯಾವುದನ್ನೂ ಲೆಕ್ಕಿಸದೆ ನಮಗೆ ಕ್ಯಾಶ್ ಮಾತ್ರ ಬೇಕು, ಹಣ ನೀಡಿದರೆ ಮಾತ್ರ ಮುಂದಿನ ಕೆಲಸ ಮಾಡುತ್ತೇವೆ. ನಿಧಾನವಾಗಿಯೇ ತಂದುಕೊಡಿ ಪರವಾಗಿಲ್ಲ ಎಂದು ಜೋರಾಗಿ ಮಾತನಾಡಿದರು ಎಂದು ರೋಗಿಯ ಪುತ್ರಿ ಅಳಲು ತೋಡಿಕೊಂಡರು.

ಎಲ್ಲೂ ಬೆಡ್ ಸಿಗದೆ, ಮೂರು ದಿನಗಳಿಂದ ಉಸಿರಾಟದ ತೊಂದರೆಯಿಂದಾಗಿ ತೀರಿಕೊಂಡರು. ಎಲ್ಲ ಕಡೆ ಬೆಡ್ ಫುಲ್ ಆಗಿದೆ, ಮನೆಯಲ್ಲೇ ನೋಡಿಕೊಳ್ಳಬೇಕು ಎಂದು ಹೇಳಿದರು. ತುಂಬಾ ಪ್ರಯತ್ನಿಸಿದರೂ ಬೆಡ್ ಸಿಗಲಿಲ್ಲ, ಹೀಗಾಗಿ ಸಾವನ್ನಪ್ಪಿದರು. ಬಳಿಕ ಅಂಬುಲೆನ್ಸ್ ನವರು ಸಹ ಹಣಕ್ಕೆ ಬೇಡಿಕೆ ಇಟ್ಟರು ಎಂದು ಪುತ್ರಿ ಬೇಸರ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಜನತೆ ನರಕಯಾತನೆ ಅನುಭವಿಸುವಂತಾಗಿದ್ದು, ದೇವರೇ ಇದೆಂಥಾ ಸ್ಥಿತಿ, ಎಂಥಾ ಅಗ್ನಿ ಪರೀಕ್ಷೆ? ಬೆಡ್ ಇಲ್ಲ, ನೆಮ್ಮದಿಯ ಅಂತ್ಯಸಂಸ್ಕಾರವೂ ಇಲ್ಲ. ಇಂತಹ ಸ್ಥಿತಿ ಯಾರಿಗೂ ಬರಲೇ ಬಾರದು ಎಂದು ಜನ ಹಿಡಿಶಾಪಹಾಕುತ್ತಿದ್ದಾರೆ. ಬದುಕಿದ್ದಾಗ ಬೆಡ್, ಸತ್ತಾಗ ಅಂತ್ಯಸಂಸ್ಕಾರ ಪ್ರಾಬ್ಲಂ, ಬದುಕಿದ್ದಾಗಲೂ ದುಡ್ಡು ಖರ್ಚು, ಸತ್ತಾಗಲೂ ನೆಮ್ಮದಿ ಅಂತ್ಯಸಂಸ್ಕಾರಕ್ಕೆ ಹಣ ನೀಡಬೇಕು. ನೀವು ದುಡ್ಡು ಕೊಡದಿದ್ದರೆ ನಿಮ್ಮವರ ಹೆಣ ಬೀದಿ ಪಾಲು ಎನ್ನುವ ಸ್ಥಿತಿ ನಿರ್ಮಾಣವಾಗಿದೆ.

Comments

Leave a Reply

Your email address will not be published. Required fields are marked *