ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ- ವಿಸ್ಮಯ ಕಣ್ತುಂಬಿಕೊಂಡ ಭಕ್ತಗಣ

ತಿರುವನಂತಪುರಂ: ಶಬರಿಮಲೆಯಲ್ಲಿ ಸಾವಿರಾರು ಭಕ್ತರು ಕಾತರದಿಂದ ಕಾಯುತ್ತಿದ್ದ ಮಕರ ಜ್ಯೋತಿ ಗೋಚರವಾಗಿದ್ದು, ಜ್ಯೋತಿಯನ್ನು ಕಣ್ತುಂಬಿಕೊಂಡಿದ್ದಾರೆ.

ಇಂದು ಸಂಜೆ 6.42ಕ್ಕೆ ಸರಿಯಾಗಿ ಪೊನ್ನಂಬಲಮೇಡು ಗಿರಿಯಲ್ಲಿ ಮಕರ ಜ್ಯೋತಿ ಗೋಚರವಾಗಿದೆ. ಜ್ಯೋತಿ ಕಾಣುತ್ತಿದ್ದಂತೆ ಸಾವಿರಾರು ಭಕ್ತರು ಸಂತಸಗೊಂಡು, ಕಣ್ತುಂಬಿಕೊಂಡಿದ್ದಾರೆ. ಅಯ್ಯಪ್ಪನ ನಾಮಸ್ಮರಣೆ ಹಾಗೂ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಕೊರೊನಾ ಹಿನ್ನೆಲೆ ಕಡಿಮೆ ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಇಂದು ಹಲವರು ಜ್ಯೋತಿಯನ್ನು ನೋಡಿದ್ದಾರೆ.

ಕೊರೊನಾ ಹಿನ್ನೆಲೆ ಈ ಬಾರಿ ಶಬರಿಮಲೆ ದೇವಸ್ಥಾನದಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಕೈಗೊಳ್ಳಲಾಗಿತ್ತು. ಹೀಗಾಗಿ ಮಕರ ಜ್ಯೋತಿ ದರ್ಶನಕ್ಕೆ ಸಹ ಕೇವಲ 5 ಸಾವಿರ ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಅಲ್ಲದೆ ಆರ್ ಟಿಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದವರಿಗೆ ಮಾತ್ರ ದೇವಾಲಯ ಹಾಗೂ ಜ್ಯೋತಿ ನೋಡಲು ಅವಕಾಶ ಕಲ್ಪಿಸಲಾಗಿತ್ತು.

ದೇವಸ್ಥಾನದಿಂದ 8 ಕಿ.ಮೀ ದೂರದಲ್ಲಿ ಪೊನ್ನಂಬಲಮೇಡು ಗಿರಿ ಇದ್ದು, ಪ್ರತಿ ವರ್ಷದಂತೆ ಈ ವರ್ಷವೂ ಮಕರ ಜ್ಯೋತಿ ಗೋಚರಿಸಿದೆ. ಈ ವಿಶೇಷ ಘಳಿಗೆಗಾಗಿ ಕಾದಿದ್ದ ಸಾವಿರಾರು ಭಕ್ತರು ಮಕರ ಜ್ಯೋತಿಯ ದರ್ಶನವಾಗುತ್ತಿದ್ದಂತೆ ಗಟ್ಟಿಯಾಗಿ `ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂದು ಹೇಳಿ ಘೋಷಣೆ ಕೂಗಿದರು. ಭಕ್ತಿಯಿಂದ ಮಕರ ಜ್ಯೋತಿಗೆ ನಮಸ್ಕರಿಸಿ ಧನ್ಯರಾದರು.

ಐತಿಹಾಸಿಕ ಸಾಂಪ್ರದಾಯದಂತೆ ಪಂದಳದಿಂದ ಘೋಷಯಾತ್ರೆಯ ಮೂಲಕ ತಂದ ತಿರುವಾಭರಣಗಳನ್ನು ಅಯ್ಯಪ್ಪನಿಗೆ ತೊಡಿಸಿ ದೀಪಾರಾಧನೆ ನಡೆಸಿದ ಬಳಿಕ ಮಹಾ ಮಂಗಳರಾತಿಯನ್ನು ಮಾಡಲಾಗುತ್ತದೆ. ಮಹಾ ಮಂಗಳಾರತಿ ನಡೆದ ಬಳಿಕ ಪೊನ್ನಂಬಲಮೇಡು ಬೆಟ್ಟದಲ್ಲಿ ಮೂರು ಬಾರಿ ಜ್ಯೋತಿ ಕಾಣಿಸುತ್ತದೆ.

Comments

Leave a Reply

Your email address will not be published. Required fields are marked *