ವ್ಯಾಕ್ಸಿನ್ ಖರೀದಿಗೆ ಕಾಂಗ್ರೆಸ್ಸಿನಿಂದ 110 ಕೋಟಿ ಕೊಡ್ತೇವೆ: ಸಿದ್ದರಾಮಯ್ಯ

ಬೆಂಗಳೂರು: ಕಾಂಗ್ರೆಸ್ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಕೊರೊನಾ ವ್ಯಾಕ್ಸಿನ್ ಖರೀದಿಗೆ 110 ಕೋಟಿ ರೂ. ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋವಿಡ್ ನಿರ್ವಹಣೆಯಲ್ಲಿ, ವ್ಯಾಕ್ಸಿನ್ ವಿತರಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಹಾಗಾಗಿ ಕಾಂಗ್ರೆಸ್ ಹಿರಿಯ ನಾಯಕರ ಸಭೆಯಲ್ಲಿ, ಶಾಸಕಾಂಗ ಪಕ್ಷದ ಶಾಸಕರು ತೀರ್ಮಾನ ಮಾಡಿದ್ದೇವೆ. 95 ಎಂಎಲ್ ಎ, ಎಂಎಲ್ ಸಿ ಗಳು ಇದ್ದಾರೆ. ಒಬ್ಬ ಎಂಪಿ, ನಾಲ್ವರು ರಾಜ್ಯಸಭಾ ಸದಸ್ಯರು ಇದ್ದಾರೆ. ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ತಲಾ ಒಂದು ಕೋಟಿಯನ್ನ ವ್ಯಾಕ್ಸಿನ್ ಖರೀದಿಗೆ ಕೊಡುತ್ತೇವೆ. ಒಟ್ಟಾರೆ ಕಾಂಗ್ರೆಸ್ ನಿಂದ ನಮ್ಮ ಅನುದಾನದಲ್ಲಿ 110 ಕೋಟಿ ಕೊಡುತ್ತೇವೆ ಎಂದು ಮಾಹಿತಿ ನೀಡಿದರು.

ಸ್ವಾತಂತ್ರ್ಯ ಬಂದ ನಂತರ ಇದೇ ಮೊದಲು ಸರ್ಕಾರ ಈ ರೀತಿಯಲ್ಲಿ ನಡೆದುಕೊಳ್ಳುತ್ತಿದೆ. 2020 ಜನವರಿ 30ಕ್ಕೆ ಕೊರೊನಾ ಭಾರತಕ್ಕೆ ಕಾಲಿಟ್ಟಿತ್ತು. ಒಂದು ವರ್ಷಕ್ಕಿಂತ ಹೆಚ್ಚಾಗಿದೆ. ಎರಡನೇ ಅಲೆ ಬರುತ್ತೆ ಎಂದು ಮಾಹಿತಿ ಕೂಡ ಇದೆ. ಅಂತಿಮವಾಗಿ ಈ ರೋಗ ಹೋಗಬೇಕು ಅಂದ್ರೆ ವ್ಯಾಕ್ಸಿನ್ ಮಾಡಬೇಕು ಎಲ್ಲ ತಜ್ಞರು ಹೇಳುತ್ತಾರೆ. ಇದು ಕೇಂದ್ರ, ರಾಜ್ಯ ಸರ್ಕಾರಕ್ಕೆ ಗೊತ್ತಿತ್ತು ಎಂದರು.

ಮೋದಿ ಎಲ್ಲಿ, ಯಡಿಯೂರಪ್ಪ ಇಲ್ಲಿ ನಿದ್ರಾವಸ್ಥೆಯಲ್ಲಿ ಇದ್ದಾರೆ. ನವೆಂಬರ್ ನಿಂದ ಸಿದ್ಧತೆ ಮಾಡಿಕೊಂಡಿಲ್ಲ. ಈಗ ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುತ್ತಿದ್ದಾರೆ. ಸಿಎಸ್ ಹೇಳುತ್ತಾರೆ ತಿಂಗಳುಗಟ್ಟಲೆ ಆಗಬಹುದು ಎಂದು ಹೇಳುತ್ತಾರೆ. ಯಾರ ಮಾತನ್ನ ಕೇಳ್ಬೇಕು ಜನರು ಎಂದು ಪ್ರಶ್ನಿಸಿದರು.

ಕೋವಿಶೀಲ್ಡ್ ಡೋಸ್ ತೆಗೆದುಕೊಳ್ಳುವುದರಲ್ಲಿ ಇವರು ಒಂದೊಂದು ಹೇಳಿಕೆ ನೀಡುತ್ತಾರೆ. ಒಂದು ಡೋಸ್ ನಂತರ ನಾಲ್ಕು ವಾರದ ಬಳಿಕ ಅಂತಾ ಒಂದು ಸಾರಿ ಹೇಳ್ತಾರೆ. ಇನ್ನೊಂದು ಸಲ 6 ವಾರ ವಾರ, ಎಂಟು ವಾರ ಅಂತಾ ಹೇಳಿಕೆ ನೀಡುತ್ತಿದ್ದಾರೆ. ಇದರ ಬಗ್ಗೆ ಅನುಮಾನ ಇದೆ. ಪದೇ ಪದೇ ಏಕೆ ವ್ಯಾಕ್ಸಿನ್ ಮಾರ್ಗಸೂಚಿಗಳನ್ನ ಬದಲಾಯಿಸುವುದು.Most Secular Diseases ಏನಾದ್ರೂ ಇದ್ರೆ ಅದು ಕೊರೊನಾ. ಇದು ಯಾವ ಜಾತಿ, ಧರ್ಮ ನೋಡುವುದಿಲ್ಲ ಎಂದರು.

Comments

Leave a Reply

Your email address will not be published. Required fields are marked *