ವೆಂಟಿಲೇಟರ್ ಸಿಗದೆ 31 ವರ್ಷದ ಯುವಕ ಕೊರೊನಾಗೆ ಬಲಿ

– ಐಸಿಯುಗೆ ಶಿಫ್ಟ್ ಮಾಡಿದ್ದೇವೆಂದು ಸುಳ್ಳು ಹೇಳಿತಾ ಆಸ್ಪತ್ರೆ

ಚಿಕ್ಕಮಗಳೂರು: ವೆಂಟಿಲೇಟರ್ ಸಿಗದ 31 ವರ್ಷದ ಯುವಕ ಕೊರೊನಾಗೆ ಬಲಿಯಾಗಿರುವ ಘಟನೆ ಚಿಕ್ಕಮಗಳೂರು ನಗರದ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ನಡೆದಿದೆ.

31 ವರ್ಷದ ಮೇಘರಾಜ್ ಮೃತ ದುರ್ದೈವಿ. ಮೃತ ಮೇಘರಾಜ್ ಮೂಲತಃ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮತ್ತಿಕಟ್ಟೆ ಸಮೀಪದ ಬಸನಿ ಗ್ರಾಮದ ನಿವಾಸಿ. ಕೊರೊನಾ ಸೋಂಕಿಗೆ ತುತ್ತಾಗಿದ್ದ ಮೇಘರಾಜ್ ಕಳೆದೊಂದು ವಾರದ ಹಿಂದೆ ನಗರದ ಹೋಲಿಕ್ರಾಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದೊಂದು ವಾರದಿಂದ ಚಿಕಿತ್ಸೆಯಲ್ಲಿದ್ದ ಮೇಘರಾಜ್ ಕಳೆದ ರಾತ್ರಿ 1.30ರವರೆಗೂ ಚೆನ್ನಾಗಿದ್ದರು. ಆದರೆ, ಇಂದು ಬೆಳಗ್ಗೆ ಮೇಘರಾಜ್ ಮೊಬೈಲ್‍ಗೆ ಕರೆ ಮಾಡಿದಾಗ ಆಸ್ಪತ್ರೆಯವರು ಅವರು ಸಾವನ್ನಪ್ಪಿರುವುದಾಗಿ ತಿಳಿದ್ದಾರೆ.

ವಿಷಯ ಕೇಳಿ ಕುಟುಂಬಸ್ಥರು, ಸ್ನೇಹಿತರಿಗೆ ಬರಸಿಡಿಲು ಬಡಿದಂತಾಗಿದೆ. ಅಯ್ಯೋ… ದೇವ್ರೆ, ರಾತ್ರಿ 1.30ರ ತನಕ ಚೆನ್ನಾಗಿದ್ದವನು ದಿಢೀರ್ ಎಂದು ಹೇಗೆ ಸತ್ತ ಎಂದು ಕಂಗಾಲಾಗಿದ್ದಾರೆ. ಮೃತ ಮೇಘರಾಜ್ ರಾತ್ರಿ 1:30ರವರೆಗೆ ಚಾಟ್ ಮಾಡಿದ್ದಾನೆ. ನಾನು ಜನರಲ್ ವಾರ್ಡಿನಲ್ಲಿ ಇದ್ದೇನೆ. ನನಗೆ ಉಸಿರಾಟದ ಸಮಸ್ಯೆ ಇದೆ. ಐಸಿಯು ಬೆಡ್ ಬೇಕಿದೆ ಎಂದು ಸ್ನೇಹಿತರಿಗೆ ಮೆಸೇಜ್ ಮಾಡಿದ್ದಾನೆ.

ಉಸಿರಾಟದ ಸಮಸ್ಯೆ ಇದೆ ಎಂದು ವೆಂಟಿಲೇಟರ್‍ಗಾಗಿ ಆಸ್ಪತ್ರೆಯವರಿಗೆ ಕೇಳಿಕೊಂಡಿದ್ದನಂತೆ. ಇಂದು ಬೆಳಗ್ಗೆ ಮೃತ ಮೇಘರಾಜ್ ಕುಟುಂಬಸ್ಥರು ಬೆಳಗ್ಗೆ ಆಸ್ಪತ್ರೆಯವರಿಗೆ ಕೇಳಿದಾಗ ರಾತ್ರಿ 12 ಗಂಟೆಗೆ ಐಸಿಯುಗೆ ಶಿಫ್ಟ್ ಮಾಡಿದ್ದೆವು, ಬೆಳಗ್ಗೆ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರಂತೆ. ಮೇಘರಾಜ್ 1.30ರವರೆಗೆ ಜನರಲ್ ವಾರ್ಡಿನಲ್ಲಿ ಇದ್ದೇನೆ ಎಂದು ಮೆಸೇಜ್ ಮಾಡಿದ್ದಾನೆ. ಆಸ್ಪತ್ರೆಯವರು ರಾತ್ರಿ 12 ಗಂಟೆಗೆ ಐಸಿಯುಗೆ ಶಿಫ್ಟ್ ಮಾಡಿದ್ದೇವೆ ಎಂದು ಹೇಳಿದ್ದಾರೆ. ಮೇಘರಾಜ್ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದರೂ ಆಸ್ಪತ್ರೆಯವರು ಜನರಲ್ ವಾರ್ಡಿನಲ್ಲೇ ಇಟ್ಟು ಚಿಕಿತ್ಸೆ ನೀಡಿ ಆತನ ಸಾವಿಗೆ ಕಾರಣರಾಗಿದ್ದಾರೆ ಎಂದು ಮೇಘರಾಜ್ ಸಂಬಂಧಿಕರು ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆಯವರು ಆಗಲ್ಲ ಎಂದು ಹೇಳಿದ್ದರೆ, ನಾವು ಬೇರೆ ಕಡೆ ಶಿಫ್ಟ್ ಮಾಡುತ್ತಿದ್ದೆವು. ಆದರೆ, ಆಸ್ಪತ್ರೆಯವರು ಜನರಲ್ ವಾರ್ಡಿನಲ್ಲಿ ಇಟ್ಟು ನಿಗಾ ವಹಿಸಿ ಸೂಕ್ತ ಚಿಕಿತ್ಸೆ ನೀಡದಿರುವುದರಿಂದ ನಮ್ಮ ಹುಡುಗ ಸಾವನ್ನಪ್ಪಿದ್ದಾನೆ ಎಂದು ಮೃತನ ಪೋಷಕರು ಆಸ್ಪತ್ರೆ ಮುಂದೆ ಕಣ್ಣೀರಿಟ್ಟಿದ್ದಾರೆ. ಇತ್ತೀಚೆಗಷ್ಟೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಯುವಕ ಹಳ್ಳಿಯ ಅಭಿವೃದ್ಧಿ ಬಗ್ಗೆಯೂ ತೀವ್ರ ಕನಸು ಕಂಡಿದ್ದು, ಗ್ರಾಮದ ಯುವಕರ ಜೊತೆ ಅಭಿವೃದ್ಧಿಯ ಕುರಿತು ಚರ್ಚೆ ನಡೆಸುತ್ತಿದ್ದ. ಇದನ್ನೆಲ್ಲಾ ನೆನೆದ ಸ್ನೇಹಿತರು ಕೂಡ ಆತನ ಸಾವಿಗೆ ಕಣ್ಣೀರಿಟ್ಟಿದ್ದಾರೆ. ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆ ಹಾಗೂ ಶಿವಗಿರಿ ಸೇವಾ ಯುವಕರ ತಂಡ ಮೇಘರಾಜ್ ಸ್ವಗ್ರಾಮ ಬಸನಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

Comments

Leave a Reply

Your email address will not be published. Required fields are marked *