ವಿಶ್ವನಾಥ್ ಅನಾಥರಲ್ಲ, ನಮ್ಮ ಜೊತೆಗೇ ಇದ್ದಾರೆ: ಸಚಿವ ಸೋಮಶೇಖರ್

ಗದಗ: ಮಾಜಿ ಸಚಿವ ಎಚ್.ವಿಶ್ವನಾಥ್ ಅನಾಥರಲ್ಲ, ನಮ್ಮ ಜೊತೆಯಲ್ಲೇ ಇದ್ದಾರೆ. ಬಿಜೆಪಿಗೆ ಬಂದವರಿಗೆ ಒಂದೊಂದು ಅವಕಾಶ ಆಗಿದೆ. ಅದೇ ರೀತಿ ಮುಂದಿನ ದಿನಗಳಲ್ಲಿ ವಿಶ್ವನಾಥ ಅವರಿಗೂ ಅವಕಾಶ ಸಿಗುತ್ತದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳ್ಳಿಹಕ್ಕಿ ಎಚ್.ವಿಶ್ವನಾಥ್ ಅನಾಥರಲ್ಲ, ಜೊತೆಯಲ್ಲೇ ಇದ್ದಾರೆ. ಬಂದವರಿಗೆ ಒಂದೊಂದು ಅವಕಾಶ ಆಗಿದೆ. ಅದೇ ರೀತಿ ಮುಂದಿನ ದಿನಗಳಲ್ಲಿ ವಿಶ್ವನಾಥ್ ಅವರಿಗೂ ಅವಕಾಶ ಸಿಗುತ್ತದೆ. ನಮಗೆ ಹತ್ತೂ ಜನರಿಗೆ ಒಂದು ಬಾರಿ ಅವಕಾಶ ಆಯಿತು. ಇದೀಗ ಎಂಟಿಬಿ ನಾಗರಾಜ್ ಹಾಗೂ ಆರ್.ಶಂಕರಗೆ ಸ್ಥಾನ ನೀಡಲಾಗಿದೆ. ಮುನಿರತ್ನ ಹಾಗೂ ಪ್ರತಾಪ್‍ಗೌಡ ಪಾಟೀಲ್ ಅವರಿಗೆ ಮುಂದಿನ ತಿಂಗಳು ಚುನಾವಣೆ ನಿಗದಿಯಾಗುತ್ತದೆ. ಎಲ್ಲರಿಗೂ ಹಂತ ಹಂತವಾಗಿ ಸ್ಥಾನ ಸಿಗುತ್ತದೆ ಎಂದು ಹೇಳಿದರು.

ವಿಶ್ವನಾಥ್ ಅವರಿಗೂ ಮುಖ್ಯಮಂತ್ರಿ ಯಡಿಯೂರಪ್ಪ ಎಂಎಲ್‍ಸಿ ಸ್ಥಾನದ ಆಶ್ವಾಸನೆ ನೀಡಿದ್ದಾರೆ. ಯಾರಿಗೂ ಇಲ್ಲ ಎನ್ನುವ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿಗಳು ನುಡಿದಂತೆ ನಡೆದಿದ್ದಾರೆ. ವಿಶ್ವನಾಥ್ ಸಮೇತ ಮುಖ್ಯಮಂತ್ರಿಗಳ ಭೇಟಿ ಮಾಡಿ, ಈ ಬಗ್ಗೆ ಚರ್ಚಿಸಿದ್ದೇವೆ. ಮುಂದಿನ ಬಾರಿ ಅವಕಾಶ ಕೊಡುವುದಾಗಿ ಹೇಳಿದ್ದಾರೆ. ಇದಕ್ಕೆ ವಿಶ್ವನಾಥ್ ಸಹ ಒಪ್ಪಿಕೊಂಡಿದ್ದಾರೆ ಎಂದರು.

ವಿಶ್ವನಾಥ್ ಅವರಿಗೆ ಅವಕಾಶ ತಪ್ಪಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಕುಮಾರಸ್ವಾಮಿ ಕಾರಣ ಎಂಬ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಅವರ ವೈಯಕ್ತಿಕ ಅಭಿಪ್ರಾಯ. ಬಿಜೆಪಿ ಸರ್ಕಾರ ಯಾವಾಗಲೂ ವಿಶ್ವನಾಥ್ ಅವರ ಜೊತೆಗಿರುತ್ತದೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *