ವಿಶ್ವಕ್ಕೆ ಕೊರೊನಾ ಹಬ್ಬಿಸಿದ್ದ ಚೀನಾದಲ್ಲಿ ಭರ್ಜರಿ ಆರ್ಥಿಕ ಪ್ರಗತಿ

ಬೀಜಿಂಗ್‌: ಇಡೀ ವಿಶ್ವಕ್ಕೆ ಕೊರೊನಾ ವೈರಸ್‌ ಹರಡಿಸಿದ್ದ ಚೀನಾದಲ್ಲಿ ಈಗ ಭರ್ಜರಿ ಆರ್ಥಿಕ ಪ್ರಗತಿಯಾಗಿದೆ.

ಜನವರಿಯಿಂದ ಹಣಕಾಸು ವರ್ಷ ಹೊಂದಿರುವ ಚೀನಾದ ಮೂರನೇ ತ್ರೈಮಾಸಿಕ ವರದಿ ಪ್ರಕಟಗೊಂಡಿದ್ದು, ಜಿಡಿಪಿ ದರ ಶೇ.4.9 ರಷ್ಟು ಪ್ರಗತಿ ಕಂಡಿದೆ. ಕೋವಿಡ್‌ 19 ನಿಂದಾಗಿ ಮೊದಲ ತ್ರೈಮಾಸಿಕದಲ್ಲಿ ಮೈನಸ್‌ ಶೇ. 6.8ರಷ್ಟು ಕುಸಿತ ಕಂಡಿತ್ತು. ಇದು ಕಳೆದ 44 ವರ್ಷದಲ್ಲಿ ಅತ್ಯಂತ ಕಳಪೆ ಸಾಧನೆಯಾಗಿತ್ತು.

ಬಳಿಕ ಸರ್ಕಾರ ಆರ್ಥಿಕತೆ ಚೇತರಿಕೆಗೆ ಕೈಗೊಂಡ ಕ್ರಮಗಳಿಂದಾಗಿ 2ನೇ ತ್ರೈಮಾಸಿಕದಲ್ಲಿ ಶೇ.3.2ರಷ್ಟು ಏರಿಕೆ ಕಂಡಿತ್ತು. ಈಗ ಈ ಚೇತರಿಕೆ ಪ್ರಮಾಣ ಶೇ.4.9ಕ್ಕೆ ಏರಿಕೆಯಾಗಿದೆ.

ಬೇಡಿಕೆ ಮತ್ತು ಖರೀದಿ ಹೆಚ್ಚಿಸಲು ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳಿಂದಾಗಿ ಆರ್ಥಿಕತೆ ಏರಿಕೆಯಾಗುತ್ತಿದೆ. ಆರ್ಥಿಕ ಕುಸಿತದಿಂದ ಪಾರಾಗಲು ಚೀನಾ ಸರ್ಕಾರ ತೆರಿಗೆ ರಿಯಾಯಿತಿ ಪ್ರಕಟಿಸಿತ್ತು. ಸಾಲದ ಮೇಲಿನ ಬಡ್ಡಿ ದರ ವನ್ನು ಇಳಿಕೆ ಮಾಡಿತ್ತು.

ಐಎಂಎಫ್‌ ಏನು ಹೇಳಿದೆ?
ಕೋವಿಡ್‌ ಬಿಕ್ಕಟ್ಟಿನಿಂದ ಭಾರತದ ಜಿಡಿಪಿ ಮೈನಸ್‌ ಶೇ.10.5ಕ್ಕೆ ಕುಸಿಯಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್‌) ಅಂದಾಜು ಮಾಡಿದೆ. 2019ರಲ್ಲಿ ಭಾರತದ ಜಿಡಿಪಿ ಶೇ.4.2ರಷ್ಟಿತ್ತು. ಕೋವಿಡ್‌ ಮತ್ತು ಕೆಲವು ಕಾರಣಗಳಿಂದಾಗಿ ಭಾರತದ ಜಿಡಿಪಿ ಸದ್ಯಕ್ಕೆ ಪಾತಾಳಕ್ಕೆ ಬಿದ್ದಿದೆ.

2020ರಲ್ಲಿ ಅಮೆರಿಕ ಜಿಡಿಪಿ ಮೈನಸ್‌ ಶೇ.10.3 ಆಗಿದ್ದರೆ ಜಾಗತಿಕ ಜಿಡಿಪಿ ಮೈನಸ್‌ ಶೇ. 4.4 ಆಗಲಿದೆ. 2021ರಲ್ಲಿ ಭಾರತದ ಜಿಡಿಪಿ ಶೇ. 8.8, ಅಮೆರಿಕ ಶೇ.3.9, ಜಾಗತಿಕ ಜಿಡಿಪಿ ಶೇ.5.5ರಷ್ಟು ಪ್ರಗತಿ ಕಾಣಲಿದೆ ಎಂದು ಐಎಂಎಫ್‌ ಅಂದಾಜಿಸಿದೆ.

Comments

Leave a Reply

Your email address will not be published. Required fields are marked *