ವಿಶಾಲ ಗಾಣಿಗಳಿಗೆ ದುಬೈನಿಂದ ಪತಿ ಸ್ಕೆಚ್ – ನೇಪಾಳ ಗಡಿಯಲ್ಲಿ ಸುಪಾರಿ ಕಿಲ್ಲರ್ ಅರೆಸ್ಟ್

ಉಡುಪಿ: ಇಲ್ಲಿನ ವಿಶಾಲ ಗಾಣಿಗ ಕೊಲೆ ಪ್ರಕರಣವನ್ನು ಪೊಲೀಸರು 10 ದಿನದೊಳಗೆ ಬೇಧಿಸಿದ್ದಾರೆ. ನೇಪಾಳ ದೇಶದ ಗಡಿ ಪ್ರದೇಶದಲ್ಲಿ ಸುಪಾರಿ ಹಂತಕ ಅರೆಸ್ಟ್ ಆಗಿದ್ದಾನೆ. ಪತಿಯೇ ಪತ್ನಿಯ ಕೊಲೆಗೆ ಎರಡು ಲಕ್ಷ ರೂಪಾಯಿ ಅಡ್ವಾನ್ಸ್ ಕೊಟ್ಟಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಜುಲೈ 12 ರಂದು ಸಂಜೆ ಉಡುಪಿ ಜಿಲ್ಲೆ ಬ್ರಹ್ಮಾವರದ ಮಿಲನ್ ಅಪಾರ್ಟ್ ಮೆಂಟ್ ನಲ್ಲಿ ವಿಶಾಲ ಕೊಲೆಯಾಗಿತ್ತು. ಮೈಮೇಲಿದ್ದ ಚಿನ್ನಾಭರಣವನ್ನು ಕದ್ದು ಆರೋಪಿ ಪ್ರಕರಣದ ದಿಕ್ಕು ತಪ್ಪಿಸಿ ಪರಾರಿಯಾಗಿದ್ದ. ಒಂದು ವಾರಗಳ ಕಾಲ ತನಿಖೆ ನಡೆಸಿದ ಪೊಲೀಸರು, ಉತ್ತರಪ್ರದೇಶ ರಾಜ್ಯದ ಗೋರಖಪುರ ಜಿಲ್ಲೆಯ ಚಾರ್ಪನ್ ಬಹುರಾಗ್ ಗ್ರಾಮದ ಶ್ರೀ ಸ್ವಾಮಿನಾಥ ನಿಶಾದ (38) ನನ್ನು ಬಂಧಿಸಲಾಗಿದೆ. ಆರೋಪಿ ಕೊಲೆಗೈದು ಉತ್ತರ ಪ್ರದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದ.

ಪೊಲೀಸ್ ತನಿಖೆ ತೀವ್ರವಾಗುತ್ತಿದ್ದಂತೆ ನೇಪಾಳ ದೇಶಕ್ಕೆ ನುಸುಳಲು ಯತ್ನಿಸಿದ್ದ. ಕೊಲೆಯ ಹಿಂದಿನ ಸಂಚು ಗಂಡನದ್ದೆಂದು ಪೊಲೀಸರು ಫೋನ್ ಕರೆಯೊಂದರಿಂದ ಕಂಡು ಹುಡುಕಿದ್ದಾರೆ. ಸಾಕ್ಷಿಗಳೇ ಇಲ್ಲದ ಸವಾಲಿನ ಪ್ರಕರಣವನ್ನು ತಾಂತ್ರಿಕ ಸಾಕ್ಷಿಗಳ ಮೂಲಕ ಪತ್ತೆ ಮಾಡಿದ್ದಾರೆ. ಗಂಡ-ಹೆಂಡತಿಯ ನಡುವೆ ಅನ್ಯೋನ್ಯತೆ ಸಮಸ್ಯೆಯಿತ್ತು. ಇದೇ ಕಾರಣಕ್ಕೆ ಕೊಲೆ ಮಾಡಿಸಿರುವುದಾಗಿ ಗಂಡ ರಾಮಕೃಷ್ಣ ಗಾಣಿಗ ಹೇಳಿಕೆ ನೀಡಿದ್ದಾನೆ. ಇದನ್ನೂ ಓದಿ: ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರಿಯಲಿ: ಸಿದ್ದಗಂಗಾ ಶ್ರೀ

ತನ್ನ ಹೇಳಿಕೆಗಳನ್ನು ಆಗಾಗ ಬದಲಿಸುತ್ತಿರುವ ರಾಮಕೃಷ್ಣರನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಕೌಟುಂಬಿಕ ಸಮಸ್ಯೆಗೆ ಕೊಲೆ ನಡೆದಿರಲಿಕ್ಕಿಲ್ಲ. ಕೊಲೆಗೆ ಇನ್ನೇನೋ ಮಹತ್ವದ ಕಾರಣ ಇದೆ ಎಂಬ ಗುಮಾನಿ ಪೊಲೀಸರಿಗೆ ಇದೆ. ಆಸ್ತಿ ವಿಚಾರದ ದೃಷ್ಟಿಯಿಂದಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕೊಲೆಗೆ ಡೀಲ್ ಕುದುರಿಸಿದ ಓರ್ವ ಆರೋಪಿ ಮತ್ತು ಕೊಲೆಗೈದಿರುವ ಇನ್ನೋರ್ವ ಆರೋಪಿಯ ಬಂಧನ ಇನ್ನಷ್ಟೇ ಆಗಬೇಕಾಗಿದೆ. ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿಗಳ ತೀವ್ರ ವಿಚಾರಣೆ ನಡೆಯುತ್ತಿದೆ. ಪ್ರಕರಣ ಸಂಬಂಧ ಪೊಲೀಸರಿಗೆ ಆರಂಭಿಕ ಹಂತದಲ್ಲಿ ಯಾವುದೇ ಸಾಕ್ಷ್ಯಗಳು ಲಭ್ಯವಾಗಿರಲಿಲ್ಲ. ಪಡುಬಿದ್ರೆಯಿಂದ ಬೈಂದೂರುವರೆಗೆ ನೂರಾರು ಕಿಲೋಮೀಟರ ಸಿಸಿಟಿವಿ ಜಾಲಾಡಿದ್ದರು.

ವಿಮಾನ ನಿಲ್ದಾಣ ರೈಲು ನಿಲ್ದಾಣದಲ್ಲಿ ಪೊಲೀಸರು ಮಾಹಿತಿ ಕಲೆಹಾಕಲು ಶ್ರಮಿಸಿದ್ದರು. ಪ್ರಕರಣ ತನಿಖೆ ಮಾಡಿದ ಪೊಲೀಸರ ನಾಲ್ಕು ತಂಡಗಳಿಗೆ ಪೊಲೀಸರಿಗೆ ಎಸ್ಪಿ ವಿಷ್ಣುವರ್ಧನ್ ಧನ್ಯವಾದ ಹೇಳಿದ್ದಾರೆ. ರಾಜ್ಯದ ಗಮನ ಸೆಳೆದಿದ್ದ ಜಟಿಲ ಪ್ರಕರಣವನ್ನು ಬೇಧಿಸಿರುವ ಸಹೋದ್ಯೋಗಿಗಳಿಗೆ ಡಿಜಿಪಿ ಪ್ರವೀಣ್ ಸೂದ್ 50 ಸಾವಿರ ರುಪಾಯಿ ಬಹುಮಾನ ನೀಡಿದ್ದಾರೆ.

Comments

Leave a Reply

Your email address will not be published. Required fields are marked *