ವಿವಿಧ ಟೂರ್, ಟ್ರಾವೆಲ್ಸ್ ಕಂಪನಿಗಳ ಮೇಲೆ ಇಡಿ ದಾಳಿ- 3.57 ಕೋಟಿ ಹಣ ವಶ

ನವದೆಹಲಿ: ದೆಹಲಿ ಮತ್ತು ಗಾಜಿಯಾಬಾದ್‍ನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಟೂರ್ ಮತ್ತು ಟ್ರಾವೆಲ್ಸ್ ಕಂಪನಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ.

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ 1999 (ಫೆಮಾ)ಯನ್ನು ಉಲ್ಲಂಘಿಸಿದರ ಆರೋಪದಡಿ ಎಂಟು ವಿವಿಧ ಟೂರ್ ಮತ್ತು ಟ್ರಾವೆಲ್ಸ್ ಕಂಪನಿಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಇಡಿ ತಿಳಿಸಿದೆ.

ಸಂಸ್ಥೆಗಳ ನಿರ್ದೇಶಕರ ನಿವಾಸಗಳು, ಕಚೇರಿಗಳು ಮತ್ತು ಸಂಸ್ಥೆಯ ಚಾರ್ಟರ್ಡ್ ಅಕೌಂಟೆಂಟ್‍ಗಳ ಮನೆಗಳು ಮತ್ತು ಕಚೇರಿಗಳಲ್ಲಿ ಹುಡುಕಾಟಗಳನ್ನು ನಡೆಸಲಾಗಿದೆ. ದಾಳಿಯಲ್ಲಿ 3.57 ಕೋಟಿ ಅಕ್ರಮ ಹಣವನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ ದಾಳಿ ವೇಳೆ ಮನೆ ಮತ್ತು ಕಚೇರಿಯಲ್ಲಿ ಹಲವಾರು ಡಿಜಿಟಲ್ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಹೇಳಿದೆ.

ಈ ಕಂಪನಿಗಳು ವಿದೇಶಿಯರಿಗೆ ಇ-ವೀಸಾ ಸೇವೆಗಳನ್ನು ನೀಡುವ ಹೆಸರಿನಲ್ಲಿ ಪೇಮೆಂಟ್ ಗೇಟ್‍ವೇ ಮೂಲಕ ಅನಧಿಕೃತವಾಗಿ ವಿದೇಶಿ ಹಣವನ್ನು ಸ್ವೀಕರಿಸುತ್ತಿದ್ದವು ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲಾಗಿದೆ. ಸದ್ಯಕ್ಕೆ ವಿವಿಧ ಟೂರ್ ಹಾಗೂ ಟ್ರಾವೆಲ್ಸ್ ಕಂಪನಿಗಳು ಸೇರಿದಂತೆ ವಿವಿಧ ಘಟಕಗಳ ವಿರುದ್ಧ ಫೆಮಾ ಅಡಿಯಲ್ಲಿ ತನಿಖೆ ಆರಂಭಿಸಲಾಗಿದೆ ಎಂದು ಇಡಿ ತಿಳಿಸಿದೆ.

ಈ ಕಂಪನಿಗಳು ಹೆಚ್ಚಾಗಿ ಅಕ್ರಮ ವಹಿವಾಟಿನಲ್ಲಿ ಸಹ ಭಾಗಿಯಾಗಿವೆ. ಕೆಲ ಚಾರ್ಟರ್ಡ್ ಅಕೌಂಟೆಂಟ್‍ಗಳು ಈ ಕಂಪನಿಗಳು ವ್ಯವಹಾರಗಳನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಈ ದಾಳಿ ಜುಲೈ 9 ರಂದು ನಡೆದಿದ್ದು, ಸದ್ಯಕ್ಕೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಸಂಸ್ಥೆ ಹೇಳಿದೆ.

Comments

Leave a Reply

Your email address will not be published. Required fields are marked *