ಕ್ಯಾಲಿಕಟ್: ಕೇರಳ ವಿಮಾನ ದುರಂತ ಪ್ರಕರಣದ ತನಿಖೆ ನಡೆಸುತ್ತಿರುವ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಅಧಿಕಾರಿಗಳಿಗೆ ಬ್ಲ್ಯಾಕ್ ಬಾಕ್ಸ್ ಸಿಕ್ಕಿದೆ.
ದುಬೈನಿಂದ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಟೇಬಲ್‌ಟಾಪ್ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಲ್ಯಾಂಡ್ ಆಗಿ 35 ಅಡಿ ಆಳದ ಕಂದಕಕ್ಕೆ ಬಿದ್ದ ಪರಿಣಾಮ 18 ಮಂದಿ ಮೃತಪಟ್ಟಿದ್ದಾರೆ. 137 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದು, 22 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಇಬ್ಬರು ಪೈಲಟ್ ಮೃತಪಟ್ಟಿದ್ದು, 4 ಮಂದಿ ವಿಮಾನ ಸಿಬ್ಬಂದಿ ಪಾರಾಗಿದ್ದಾರೆ.

ಏನಿದು ಬ್ಲ್ಯಾಕ್ ಬಾಕ್ಸ್?
ವಿಮಾನದಲ್ಲಿ ಧ್ವನಿಗ್ರಹಣಕ್ಕೆ ಬಳಸಲಾಗುವ ಎರಡು ಸಾಧನಗಳನ್ನು ತಾಂತ್ರಿಕ ಭಾಷೆಯಲ್ಲಿ ‘ಬ್ಲ್ಯಾಕ್ ಬಾಕ್ಸ್’ ಎಂದು ಕರೆಯಲಾಗುತ್ತದೆ. ಬ್ಲ್ಯಾಕ್ ಬಾಕ್ಸ್ ಅನ್ನು ‘ಫ್ಲೈಟ್ ಡಾಟಾ ರೆಕಾರ್ಡರ್’ ಎಂದೂ ಕರೆಯುತ್ತಾರೆ. ಬ್ಲ್ಯಾಕ್ ಬಾಕ್ಸ್ ಹಾರಾಟದ ಸಮಯದಲ್ಲಿನ ವಿಮಾನದ ಎಲ್ಲಾ ಚಟುವಟಿಕೆಗಳನ್ನು ದಾಖಲಿಸುತ್ತದೆ. ಎಲ್ಲ ರೀತಿಯ ವಿಮಾನಗಳಲ್ಲಿ ಬ್ಲ್ಯಾಕ್ ಬಾಕ್ಸ್ ಅನ್ನು ಕಡ್ಡಾಯವಾಗಿ ಅಳವಡಿಸಲಾಗುತ್ತದೆ.

ವಿಮಾನ ಅಪಘಾತವಾದಾಗ ಅದಕ್ಕೆ ಕಾರಣ ಪತ್ತೆ ಹಚ್ಚಲು ನೆರವಾಗಲೆಂದೇ 5 ಕೆಜಿ ತೂಕದ ರೆಕಾರ್ಡಿಂಗ್ ಸಾಧನವನ್ನು ಅಳವಡಿಸಲಾಗುತ್ತದೆ. ಭದ್ರತೆಯ ದೃಷ್ಟಿಯಿಂದ ಕಪ್ಪು ಪೆಟ್ಟಿಗೆಯನ್ನು ಸಾಮಾನ್ಯವಾಗಿ ವಿಮಾನದ ಹಿಂಭಾಗದಲ್ಲಿ ಇಡಲಾಗುತ್ತದೆ. ಈ ಪೆಟ್ಟಿಗೆಯನ್ನು ಟೈಟಾನಿಯಂ ಲೋಹದಿಂದ ಮಾಡಲಾಗಿದ್ದು, ಟೈಟಾನಿಯಂ ಪೆಟ್ಟಿಗೆಯಲ್ಲಿ ಸುತ್ತುವರಿಯಲಾಗಿದೆ. ಇದು ಎಷ್ಟು ಶಕ್ತಿಶಾಲಿಯೆಂದರೆ ಸಮುದ್ರದಲ್ಲಿ ಬಿದ್ದರೆ ಅಥವಾ ಎತ್ತರದಿಂದ ಬಿದ್ದರೂ ಯಾವುದೇ ಆಘಾತವನ್ನು ತಡೆದುಕೊಳ್ಳುವ ಶಕ್ತಿಯನ್ನು ಹೊಂದಿದೆ. . ಇದನ್ನೂ ಓದಿ: ಯುದ್ಧವಿಮಾನವನ್ನು ಹಾರಿಸಿದ್ದ ಪೈಲಟ್ ಸಾಠೆ 2 ಬಾರಿ ಲ್ಯಾಂಡಿಂಗ್‌ಗೆ ಪ್ರಯತ್ನಿಸಿದ್ರು

ಹಿಂಭಾಗದಲ್ಲಿ ಯಾಕೆ?
ಅಪಘಾತದ ಸಂಭವಿಸಿದಾಗ ಹಿಂಭಾಗದಲ್ಲಿ ಅದರಲ್ಲೂ ಬಾಲದ ಕಡೆ ಪೆಟ್ಟು ಬೀಳುವುದು ಕಡಿಮೆ. ಯಾಕೆಂದರೆ ಬಾಲ ಎತ್ತರದಲ್ಲಿರುತ್ತದೆ. ಈ ಕಾರಣಕ್ಕೆ ಬಾಲದಲ್ಲಿ ಅಳವಡಿಸಲಾಗಿರುತ್ತದೆ. ವಿಮಾನದ ಎಂಜಿನ್‌ಗೆ ಜೋಡಿಸಲಾದ ಜನರೇಟರ್ ನಿಂದ ಬ್ಲ್ಯಾಕ್ ಬಾಕ್ಸ್ ಚಾರ್ಜ್ ಆಗುತ್ತದೆ. ಇದನ್ನೂ ಓದಿ: ಮರಳಿ ಮನೆಗೆ – ಟೇಕಾಫ್ ಮೊದಲು ಕುಟುಂಬದೊಂದಿಗೆ ಫೇಸ್‌ಶೀಲ್ಡ್ ಹಾಕಿ ಸೆಲ್ಫಿ, ಪ್ರಯಾಣಿಕ ಸಾವು

ಎರಡು ಪ್ರತ್ಯೇಕ ಪೆಟ್ಟಿಗೆಗಳಿವೆ
1. ಫ್ಲೈಟ್ ಡೇಟಾ ರೆಕಾರ್ಡರ್ – ಈ ಪೆಟ್ಟಿಗೆಯಲ್ಲಿ ನಿರ್ದೇಶನ, ಎತ್ತರ, ಇಂಧನ, ವೇಗ, ಕ್ಯಾಬಿನ್ ತಾಪಮಾನ ಇತ್ಯಾದಿಗಳ ಬಗ್ಗೆ ಮಾಹಿತಿ ಇರುತ್ತದೆ. ಕೊನೆಯ 25 ಗಂಟೆಗಳ ಕಾಲದ ಒಟ್ಟು 88 ಮಾಹಿತಿಗಳ ಡೇಟಾವನ್ನು ಸಂಗ್ರಹಿಸುತ್ತದೆ. 1,100 ಡಿಗ್ರಿ ಸೆಲ್ಶಿಯಸ್ ತಾಪಮಾನ ಇದ್ದರೆ 1 ಗಂಟೆ, 260 ಡಿಗ್ರಿ ಸೆಲ್ಶಿಯಸ್ ತಾಪಮಾನ ಇದ್ದರೆ ಇದ್ದರೆ 10 ಗಂಟೆಗಳ ಕಾಲ ಡೇಟಾವನ್ನು ತಡೆದಿಟ್ಟುಕೊಳ್ಳಬಹುದು. ತನಿಖಾಧಿಕಾರಿಗಳಿಗೆ ಸುಲಭವಾಗಿ ಗುರುತಿಸಲು ಕೆಂಪು ಅಥವಾ ಗುಲಾಬಿ ಬಣ್ಣದಲ್ಲಿ ಈ ಪೆಟ್ಟಿಗೆಯನ್ನು ಮಾಡಲಾಗುತ್ತದೆ.

2. ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್: ಈ ಬಾಕ್ಸ್ ಕೊನೆಯ ಎರಡು ಗಂಟೆಗಳ ವಿಮಾನದ ಧ್ವನಿಯನ್ನು ದಾಖಲಿಸುತ್ತದೆ. ಯಾವುದೇ ಅಪಘಾತ ಸಂಭವಿಸುವ ಮೊದಲು ಎಂಜಿನ್, ತುರ್ತು ಎಚ್ಚರಿಕೆ, ಕ್ಯಾಬಿನ್ ಮತ್ತು ಕಾಕ್‌ಪಿಟ್ ಧ್ವನಿಯನ್ನು ದಾಖಲಿಸುತ್ತದೆ. ಇದನ್ನೂ ಓದಿ: ವಿಮಾನ ದುರಂತ- ಮೃತಪಟ್ಟವರಲ್ಲಿ ಓರ್ವನಿಗೆ ಕೊರೊನಾ ಪಾಸಿಟಿವ್

ಹೇಗೆ ಕಾರ್ಯನಿರ್ವಹಿಸುತ್ತದೆ?
ಇದು ಯಾವುದೇ ವಿದ್ಯುತ್ ಇಲ್ಲದೆ 30 ದಿನಗಳವರೆಗೆ ಬ್ಲಾಕ್ ಬಾಕ್ಸ್ ಕೆಲಸ ಮಾಡಬಹುದು. ಪತ್ತೆ ಕಾರ್ಯ ಸುಲಭವಾಗಲು ಸುಮಾರು 30 ದಿನಗಳವರೆಗೆ ಸಿಗ್ನಲ್ ಹೊರಸೂಸುತ್ತಿರುತ್ತದೆ. ಈ ಧ್ವನಿಯನ್ನು ತನಿಖಾಧಿಕಾರಿಗಳು ಸುಮಾರು 2-3 ಕಿಲೋಮೀಟರ್ ದೂರದಿಂದ ಗುರುತಿಸಬಹುದು. 14 ಸಾವಿರ ಅಡಿ ಆಳದ ಸಮದ್ರದಲ್ಲಿದ್ದರೂ ಸಿಗ್ನಲ್ ಹೊರ ಸೂಸುತ್ತಿರುತ್ತದೆ.

ಬಳಕೆ ಆಗಿದ್ದು ಯಾವಾಗ?
1953-54ರ ವರ್ಷದಲ್ಲಿ ವಿಮಾನ ಅಪಘಾತಗಳು ಹೆಚ್ಚಾಗುತ್ತಿತ್ತು. ಯಾಕೆ ಈ ಅಪಘಾತಗಳು ಸಂಭವಿಸುತ್ತದೆ ಎಂಬುದನ್ನು ಪತ್ತೆ ಹಚ್ಚಲು ಮತ್ತು ಮುಂದೆ ಅಪಘಾತ ತಡೆಯಲು ಬ್ಲ್ಯಾಕ್‌ಬಾಕ್ಸ್ ಅನ್ನು ಅಭಿವೃದ್ಧಿ ಪಡಿಸಲಾಯಿತು. ಈ ಮೊದಲು ಇದು ಕೆಂಪು ಬಣ್ಣದ್ದಲ್ಲಿತ್ತು. ಹೀಗಾಗಿ ಇದನ್ನು ʼಕೆಂಪು ಮೊಟ್ಟೆ’ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಬಳಿಕ ಬಾಕ್ಸ್ ಒಳಗಡೆ ಇರುವ ಗೋಡೆಗಳು ಕಪ್ಪು ಬಣ್ಣದ್ದಲ್ಲಿದ್ದ ಕಾರಣ ಇದನ್ನು ‘ಬ್ಲ್ಯಾಕ್ ಬಾಕ್ಸ್’ ಎಂದು ಕರೆಯಲಾಯಿತು. ವಿಮಾನ ಅಪಘಾತಕ್ಕೆ ನಿಖರ ಕಾರಣವನ್ನು ಈ ಬ್ಲ್ಯಾಕ್ ಬಾಕ್ಸ್ ನೀಡದೇ ಇದ್ದರೂ ತನಿಖೆಯಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ಸತ್ಯ.


Leave a Reply