ವಿದ್ಯಾರ್ಥಿನಿಯಾಗಿದ್ದಾಗಲೇ ಡ್ರಗ್ ಸಪ್ಲೈ – ಅಧಿಕಾರಿಗಳು ಬಂಧಿಸಿದಾಗಲೂ ನಶೆಯಲ್ಲಿದ್ದ ಅನಿಕಾ

– ಬೆಂಗ್ಳೂರಿನಲ್ಲೇ ವಿದ್ಯಾಭ್ಯಾಸ, 6 ವರ್ಷದಿಂದ ಡ್ರಗ್ ಡೀಲರ್

ಬೆಂಗಳೂರು: ಎನ್‍ಸಿಬಿ ಬಲೆಗೆ ಬಿದ್ದಿರುವ ಲೇಡಿ ಡ್ರಗ್ ಡೀಲರ್ ಅನಿಕಾ ಕಳೆದ ಆರು ವರ್ಷದಿಂದ ಈ ದಂಧೆ ನಡೆಸುತ್ತಿದ್ದಳು ಎಂಬ ಮಾಹಿತಿ ಹೊರಬಂದಿದೆ.

ಗುರುವಾರ ಎನ್‍ಸಿಬಿ ಅಧಿಕಾರಿಗಳು ಬೆಂಗಳೂರಿನಲ್ಲಿ ಶ್ರೀಮಂತ ಜನರಿಗೆ ಮತ್ತು ಕನ್ನಡದ ನಟ-ನಟಿಯರಿಗೆ ಡ್ರಗ್ ವಿತರಣೆ ಮಾಡುತ್ತಿದ್ದ ಮೂವರು ಡ್ರಗ್ ಡೀಲರ್ ಗಳನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ಕಿಂಗ್‍ಪಿನ್ ಆಗಿದ್ದ ಅನಿಕಾ, ವಿದ್ಯಾರ್ಥಿನಿಯಾಗಿದ್ದಾಗಲೇ ಡ್ರಗ್ ವಿತರಣೆ ಮಾಡುತ್ತಿದ್ದಳು ಎಂಬ ಭಯಾನಕ ವಿಚಾರ ತನಿಖೆ ವೇಳೆ ತಿಳಿದು ಬಂದಿದೆ.

ಅನಿಕಾ ಡ್ರಗ್ ವಿತರಣೆ ಮಾಡುತ್ತಿದ್ದುದಲ್ಲದೇ ಸ್ವತಃ ಡ್ರಗ್ ವ್ಯಸನಿಯಾಗಿದ್ದಳು. ಗುರುವಾರ ಅನಿಕಾಳನ್ನು ಎನ್‍ಸಿಬಿ ಅಧಿಕಾರಿಗಳು ಬಂಧಿಸಿದಾಗ ಆಕೆ ಡ್ರಗ್ ಸೇವನೆ ಮಾಡಿದ್ದಳು. ಆಕೆಯನ್ನು ಅಧಿಕಾರಿಗಳು ಕಚೇರಿಗೆ ಕರೆತಂದು 10 ಗಂಟೆಯ ನಂತರ ಆಕೆ ಮತ್ತಿನಿಂದ ಹೊರಬಂದ ಬಳಿಕ ತನಿಖೆ ಮಾಡಿದ್ದಾರೆ. ತನಿಖೆ ವೇಳೆ ತಾನೂ ಬೆಂಗಳೂರಿನಲ್ಲೇ ವ್ಯಾಸಂಗ ಮಾಡಿದ್ದು, ಕಾಲೇಜು ದಿನಗಳಿಂದಲೇ ಡ್ರಗ್ ವಿತರಿಸುತ್ತಿದ್ದೆ ಎಂಬುದನ್ನು ಒಪ್ಪಿಕೊಂಡಿದ್ದಾಳೆ.

ಸುಮಾರು ಆರು ವರ್ಷದಿಂದಲೂ ಅನಿಕಾ ಈ ಡ್ರಗ್ಸ್ ದಂಧೆ ಮಾಡುತ್ತಿರುವುದು ತಿಳಿದು ಬಂದಿದೆ. ಜೊತೆಗೆ ಆಕೆ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾಳೆ. ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳು ಶ್ರೀಮಂತರು ಮತ್ತು ಸ್ಯಾಂಡಲ್‍ವುಡ್‍ನ ಖ್ಯಾತ ನಟ-ನಟಿಯರಿಗೂ ಡ್ರಗ್ಸ್ ಸಪ್ಲೇ ಮಾಡುತ್ತಿರುವ ಬಗ್ಗೆ ಅನಿಕಾ ತನಿಖೆ ವೇಳೆ ಬಾಯ್ಬಿಟ್ಟಿದ್ದಾಳೆ. ಸದ್ಯ ಎನ್‍ಸಿಬಿ ಅಧಿಕಾರಿಗಳಿಂದ ತನಿಖೆ ಮುಂದುವರೆದಿದೆ.

Comments

Leave a Reply

Your email address will not be published. Required fields are marked *