ವಿಜಯನಗರ ಜಿಲ್ಲೆ ಅಧಿಕೃತ – ಭೂಮಿ ತಾಯಿಗೆ ನಮಸ್ಕರಿಸಿದ ಸಚಿವ ಆನಂದ್ ಸಿಂಗ್

– ಇದು ಹಠ ಅಲ್ಲ, ಈ ಭಾಗದ ಕನಸು
– ಹೊಸಪೇಟೆಯಲ್ಲಿ ಸಂಭ್ರಮಾಚರಣೆ

ವಿಜಯನಗರ: ಕರ್ನಾಟಕದ 31ನೇ ಜಿಲ್ಲೆಯಾಗಿ ವಿಜಯನಗರ ಉದಯವಾಗಿದ್ದು, ಹೊಸಪೇಟೆಗೆ ಬಂದಿಳಿದ ಸಚಿವ ಆನಂದ್ ಸಿಂಗ್ ಭೂಮಿ ತಾಯಿಗೆ ನಮಸ್ಕರಿಸಿದರು. ಸಚಿವರನ್ನ ಅದ್ಧೂರಿಯಾಗಿ ಬರಮಾಡಿಕೊಂಡ ಹೊಸಪೇಟೆ ಜನತೆ ಶಿಳ್ಳೆ, ಚಪ್ಪಾಳೆ ಹಾಕಿ ಕುಣಿದು ಕುಪ್ಪಳಿಸಿದರು.

ಈ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಚಿವರು, ಬಳ್ಳಾರಿ ವಿಭಜನೆಯಾಗಿದೆ ಆದ್ರೆ ನಮ್ಮ ಮಧ್ಯೆ ಇರೋ ಭಾವನಾತ್ಮಕ ಸಂಬಂಧ ಕೆಡೋದಿಲ್ಲ. ವಿಜಯನಗರ ಜಿಲ್ಲೆಯಲ್ಲಿ ಈ ಹಿಂದೆ ಬಳ್ಳಾರಿ ಇತ್ತು. ರಾಜ್ಯದ ಅದೆಷ್ಟೋ ಗಡಿಗಳಲ್ಲಿ ಬಹಳ ಜಿಲ್ಲೆಗಳಿವೆ. ಭಾಷೆ ಪ್ರಭಾವ ಹೆಚ್ಚಿರಬಹುದು ಆದ್ರೆ ರಾಜ್ಯದ ಊರನ್ನು ಹೇಗೆ ಬಿಟ್ಟು ಕೊಡುತ್ತೇವೆ. ವಿಜಯನಗರ ಜಿಲ್ಲೆ ನನ್ನ ಹಠವಲ್ಲ ಈ ಭಾಗದ ಜನರ ಕನಸು. ವಿಜಯನಗರ ಜಿಲ್ಲೆ ಮಾಡಲು ಸಹಕಾರ ಮಾಡಿದ ಎಲ್ಲ ಜನಪ್ರತಿನಿಧಿಗಳಿಗೆ ಧನ್ಯವಾದಗಳನ್ನ ಸಲ್ಲಿಸಿದರು.

ಬಳ್ಳಾರಿ ಜಿಲ್ಲೆ ವಿಭಜನೆ ಆಗಿ, ನೂತನ ವಿಜಯನಗರ ಜಿಲ್ಲೆ ಇಂದಿನಿಂದ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದೆ. ವಿಜಯನಗರ ಜಿಲ್ಲೆ ಬಗ್ಗೆ ಇಂದು ರಾಜ್ಯ ಸರ್ಕಾರ ಅಧಿಕೃತವಾಗಿ ರಾಜ್ಯ ಗೆಜೆಟ್‍ನಲ್ಲಿ ಪ್ರಕಟಿಸಿದೆ. ವಿಜಯನಗರಕ್ಕೆ ಹೊಸಪೇಟೆ ಜಿಲ್ಲಾ ಕೇಂದ್ರವಾಗಿರಲಿದೆ. ನೂತನ ಜಿಲ್ಲೆಯ ವ್ಯಾಪ್ತಿಗೆ ಆರು ತಾಲೂಕುಗಳು ಬಂದಿವೆ. ಬಳ್ಳಾರಿ ಜಿಲ್ಲೆಯಲ್ಲಿ ಐದು ತಾಲೂಕುಗಳು ಉಳಿದುಕೊಂಡಿವೆ. ಡಿಸೆಂಬರ್ 14ರಂದು ಕರಡು ಗೆಜೆಟ್ ಹೊರಡಿಸಿದ್ದ ರಾಜ್ಯ ಸರ್ಕಾರ, ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿತ್ತು. ಸಾರ್ವಜನಿಕರ ಆಕ್ಷೇಪಣೆಗಳನ್ನು ಪರಿಗಣಿಸಿ ಕೆಲವು ಸಣ್ಣಪುಟ್ಟ ಮಾರ್ಪಾಡುಗಳೊಂದಿಗೆ ರಾಜ್ಯ ಸರ್ಕಾರ ಇಂದು ಅಧಿಸೂಚನೆ ಹೊರಡಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಹೌದು ಇವತ್ತು ಅದು ಕ್ಲಿಯರ್ ಆಗಿದೆ.. ವಿರೋಧ ಏನು ಇಲ್ಲ ಎಂದಿದ್ದಾರೆ. ಈ ಬೆನ್ನಲ್ಲೇ ಹೊಸಪೇಟೆಯಲ್ಲಿ ಸಂಭ್ರಮ ಮುಗಿಲುಮುಟ್ಟಿದೆ. ಇತ್ತ ಬಳ್ಳಾರಿಯಲ್ಲಿ ಪ್ರತಿಭಟನೆಗಳು ನಡೆದಿವೆ. ಇದು ಬಳ್ಳಾರಿ ಜಿಲ್ಲೆಗೆ ಮಾಡಿದ ಅಪಮಾನ ಎಂದು ಶಾಸಕ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.

ವಿಜಯನಗರ ಜಿಲ್ಲೆಗೆ 6 ತಾಲೂಕುಗಳು: ಹೊಸಪೇಟೆ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹೂವಿನಹಡಗಲಿ. ಹರಪನಹಳ್ಳಿ

ವಿಜಯನಗರ ಗಡಿ ಸರಹದ್ದು ರಚನೆ
ಪೂರ್ವ: ಚಿತ್ರದುರ್ಗ, ಬಳ್ಳಾರಿ ಜಿಲ್ಲೆ
ಪಶ್ಚಿಮ: ಗದಗ, ಹಾವೇರಿ ಜಿಲ್ಲೆ
ಉತ್ತರ : ಕೊಪ್ಪಳ ಜಿಲ್ಲೆ
ದಕ್ಷಿಣ: ದಾವಣಗೆರೆ ತಾಲೂಕು, ಹರಿಹರ ತಾಲೂಕು

ಬಳ್ಳಾರಿ ಜಿಲ್ಲೆಗೆ 5 ತಾಲೂಕುಗಳು: ಬಳ್ಳಾರಿ, ಸಂಡೂರು, ಕಂಪ್ಲಿ, ಕುರುಗೋಡು, ಸಿರುಗುಪ್ಪ

ಬಳ್ಳಾರಿ ಜಿಲ್ಲೆ ಗಡಿ ಸರಹದ್ದು ರಚನೆ
ಪೂರ್ವ: ಆಂಧ್ರಪ್ರದೇಶ ರಾಜ್ಯ
ಪಶ್ಚಿಮ: ನೂತನ ವಿಜಯನಗರ ಜಿಲ್ಲೆ
ಉತ್ತರ: ರಾಯಚೂರು ಜಿಲ್ಲೆ
ದಕ್ಷಿಣ: ಆಂಧ್ರಪ್ರದೇಶ ರಾಜ್ಯ

Comments

Leave a Reply

Your email address will not be published. Required fields are marked *