ಪೊಲೀಸರ ನರಮೇಧಕ್ಕೆ ಸಿಗ್ನಲ್ ಹೋಗಿದ್ದೆ ಠಾಣೆಯಿಂದ – ಸ್ಫೋಟಕ ಸತ್ಯ ಬಯಲು

– ವಿಕಾಸ್ ದುಬೆ ಸಹಚರನ ಬಂಧನ

ಲಕ್ನೋ: ಎಂಟು ಮಂದಿ ಪೊಲೀಸರನ್ನು ಗುಂಡಿಕ್ಕಿಕೊಂದ ರೌಡಿ ಶೀಟರ್ ವಿಕಾಸ್ ದುಬೆ ಸಹಚರನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನ್ನು ವಿಕಾಸ್ ದುಬೆ ಜೊತೆ ಬಹಳ ವರ್ಷದಿಂದ ಕೆಲಸ ಮಾಡಿದ್ದ ದಯಾ ಶಂಕರ್ ಅಗ್ನಿಹೋತ್ರಿ ಎಂದು ಗುರುತಿಸಲಾಗಿದೆ. ಈತನನ್ನು ಪೊಲೀಸರು ಭಾನುವಾರ ಮುಂಜಾನೆ ಕಲ್ಯಾಣಪುರದಲ್ಲಿ ಅಡ್ಡಹಾಕಿದ್ದಾರೆ. ಆಗ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ದಯಾ ಶಂಕರ್ ಕಾಲಿಗೆ ಗುಂಡಿಕ್ಕಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಈ ಬಂಧಿತ ದಯಾ ಶಂಕರ್ ತನಿಖೆ ವೇಳೆ ಸ್ಫೋಟಕ ಮಾಹಿತಿಯನ್ನು ಬಾಯಿಬಿಟ್ಟಿದ್ದು, ವಿಕಾಸ್ ದುಬೆಗೆ ಪೊಲೀಸರು ಅರೆಸ್ಟ್ ಮಾಡಲು ಬರುತ್ತಾರೆ ಎಂದು ಮೊದಲೇ ಗೊತ್ತಿತ್ತು. ದುಬೆಗೆ ಪೊಲೀಸ್ ಇಲಾಖೆಯಲ್ಲೇ ಮಾಹಿತಿ ನೀಡುವವರು ಇದ್ದು, ಘಟನೆ ನಡೆದ ದಿನ ಚೌಬೆಪುರ ಪೊಲೀಸ್ ಠಾಣೆಯಿಂದ ಓರ್ವ ಪೊಲೀಸ್ ಅಧಿಕಾರಿ ಕರೆ ಮಾಡಿ ನಿನ್ನನ್ನು ಅರೆಸ್ಟ್ ಮಾಡಲು ಪೊಲೀಸರು ನಿಮ್ಮ ಗ್ರಾಮಕ್ಕೆ ಬರುತ್ತಿದ್ದಾರೆ ಎಂದು ಹೇಳಿದ್ದರು ಎಂದು ಹೇಳಿದ್ದಾನೆ.

ಪೊಲೀಸರು ನನ್ನನ್ನು ಅರೆಸ್ಟ್ ಮಾಡಿದರೆ ನಾನೂ ಜೈಲು ಪಾಲಾಗುತ್ತೇನೆ ಎಂದು ವಿಕಾಸ್ ದುಬೆಗೆ ಗೊತ್ತಿತ್ತು. ಆದ್ದರಿಂದ ಆತ ವಿಷಯ ತಿಳಿಯುತ್ತಿದ್ದಂತೆ ತನ್ನ ಗ್ಯಾಂಗಿನ ಹುಡುಗರನ್ನು ಕರೆಸಿಕೊಂಡು ತಮ್ಮ ಗ್ರಾಮದಲ್ಲಿ ಉಳಿಸಿಕೊಂಡಿದ್ದ. ಪೊಲೀಸರಿಂದ ಮೊದಲೇ ಮಾಹಿತಿ ಸಿಕ್ಕ ಕಾರಣ ಪೊಲೀಸರನ್ನು ಹತ್ಯೆ ಮಾಡಲು ಪ್ಲಾನ್ ಮಾಡಿದ್ದರು. ಅದರಂತೆ ಗ್ರಾಮಕ್ಕೆ ಬಂದ ಪೊಲಿಸರನ್ನು ರಸ್ತೆಯಲ್ಲೇ ಅಡ್ಡಗಟ್ಟಿ ಕೊಂದು ಹಾಕಿದ್ದಾರೆ ಎಂದು ದಯಾ ತಿಳಿಸಿದ್ದಾನೆ.

ಈ ನಡುವೆ ಉತ್ತರ ಪ್ರದೇಶದಲ್ಲಿ ಇರುವ ವಿಕಾಸ್ ದುಬೆ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುತ್ತಿದೆ. ಡಿಕ್ರು ಗ್ರಾಮದಲ್ಲಿ ಇದ್ದ ಆತನ ಮನೆಯನ್ನು ಶನಿವಾರ ಜಿಲ್ಲಾಡಳಿತ ಜೆಸಿಬಿ ತೆಗೆದುಕೊಂಡು ಹೋಗಿ ನೆಲಸಮ ಮಾಡಿ ಬಂದಿತ್ತು. ಜೊತೆಗೆ ಮನೆಯಲ್ಲಿ ಇದ್ದ ಐಷಾರಾಮಿ ಕಾರುಗಳನ್ನು ಕೂಡ ಜಖಂ ಮಾಡಲಾಗಿತ್ತು. ಈಗ ಆತನ ಹೆಸರನಲ್ಲಿದ್ದ ಕಾರ್ಖಾನೆಗಳನ್ನು ಕೂಡ ಜಿಲ್ಲಾಡಳಿತ ಕೆಡವಿ ಹಾಕುತ್ತಿದೆ.

ಎಂಟು ಜನ ಪೊಲೀಸರನ್ನು ಕೊಂದ ವಿಕಾಸ್ ದುಬೆಯನ್ನು ಎನ್‍ಕೌಂಟರ್ ಮಾಡಬೇಕು ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿವೆ. ಈ ವಿಚಾರವಾಗಿ ಮಾತನಾಡಿದ್ದ ದುಬೆ ತಾಯಿ ಸರ್ಲಾ ದೇವಿ, ಆತ ಅಮಾಯಕ ಪೊಲೀಸರನ್ನು ಕೊಂದು ತಪ್ಪು ಮಾಡಿದ್ದಾನೆ. ಆತ ಪೊಲೀಸರಿಗೆ ಶರಣಾಗಬೇಕು. ಇಲ್ಲ ಆತನನ್ನು ಪೊಲೀಸರೇ ಗುಂಡಿಕ್ಕಿ ಕೊಲ್ಲಬೇಕು ಎಂದು ಹೇಳಿದ್ದರು. ಆದರೆ ವಿಕಾಸ್ ದುಬೆ ತಪ್ಪಿಸಿಕೊಂಡಿದ್ದಾನೆ.

ಕೊಲೆ ಪ್ರಕರಣದ ಆರೋಪದ ಮೇಲೆ ವಿಕಾಸ್ ದುಬೆಯನ್ನು ಅರೆಸ್ಟ್ ಮಾಡಲು ಹೋದ ಎಂಟು ಪೊಲೀಸರನ್ನು ಕಳೆದ ಗುರುವಾರ ಗುಂಡಿಕ್ಕಿ ಕೊಲ್ಲಲಾಗಿತ್ತು. ಓರ್ವ ಡಿವೈಎಸ್ಪಿ, ಮೂವರು ಸಬ್ ಇನ್‍ಸ್ಪೆಕ್ಟರ್ ಗಳು ಹಾಗೂ ನಾಲ್ಕು ಮಂದಿ ಕಾನ್ಸ್ ಸ್ಟೇಬಲ್‍ಗಳು ಸೇರಿದಂತೆ ಒಟ್ಟು ಎಂಟು ಜನ ಪೊಲೀಸರನ್ನು ಕಾನ್ಪುರದ ಡಿಕ್ರು ಗ್ರಾಮದಲ್ಲಿ ಗುರುವಾರ ರಾತ್ರಿ ಕ್ರಿಮಿನಲ್ ಗ್ಯಾಂಗ್ ಹತ್ಯೆ ಮಾಡಿತ್ತು.

Comments

Leave a Reply

Your email address will not be published. Required fields are marked *