ವಿಂಡೋ ಸೀಟ್‍ನಲ್ಲಿ ಅರ್ಜುನ್ ಜನ್ಯಾರ ವಿಹಂಗಮ ಯಾನ!

ಶೀತಲ್ ಶೆಟ್ಟಿ ನಿರ್ದೇಶನದ ವಿಂಡೋ ಸೀಟ್ ಕೊರೊನಾ ಬಾಧೆಯ ನಡುವೆಯೂ ಒಂದಷ್ಟು ಸುದ್ದಿ ಮಾಡುತ್ತಾ ಬಂದಿತ್ತು. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಈ ಸಿನಿಮಾದ ಮೋಷನ್ ಪೋಸ್ಟರ್ ತನ್ನ ನಿಗೂಢ ಚಹರೆಗಳ ಮೂಲಕ ಚರ್ಚೆಗೆ ಗ್ರಾಸವಾಗಿತ್ತು. ಸಿನಿಮಾವನ್ನು ಗಂಭೀರವಾಗಿ ಪರಿಗಣಿಸಿ ಅದನ್ನೇ ಕನಸಾಗಿಸಿಕೊಂಡಿರೋ ಶೀತಲ್ ಈ ಮೂಲಕ ನಿರ್ಣಾಯಕ ಹೆಜ್ಜೆಯಿರಿಸಿದ್ದಾರೆಂಬ ಮೆಚ್ಚುಗೆಯೂ ಕೇಳಿ ಬಂದಿತ್ತು. ಅದೇ ಖುಷಿಯಲ್ಲೀಗ ಶೀತಲ್ ಮತ್ತೊಂದು ಖುಷಿಯ ಸಂಗತಿಯನ್ನೂ ಹಂಚಿಕೊಂಡಿದ್ದಾರೆ.

ಕೊರೊನಾ ವೈರಸ್ ರುದ್ರತಾಂಡವವಾಡುತ್ತಿರುವಾಗಲೇ ಶೀತಲ್ ವಿಂಡೋ ಸೀಟ್‍ನ ಪೋಸ್ಟ್ ಪ್ರೊಡಕ್ಷನ್ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದರು. ಅದಾದ ನಂತರದಲ್ಲಿ ನಾನಾ ಕೆಲಸ ಕಾರ್ಯಗಳು ಅಚ್ಚುಕಟ್ಟಾಗಿ ಜರುಗುತ್ತಾ ಬಂದಿದ್ದವು. ಹೀಗಿರುವಾಗಲೇ ಕನ್ನಡ ಚಿತ್ರರಂಗದ ಪ್ರತಿಭಾವಂತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ವಿಂಡೋ ಸೀಟ್‍ಗೆ ಬಂದು ಕೂತಿರೋ ಸುದ್ದಿ ಸ್ವತಃ ಶೀತಲ್ ಕಡೆಯಿಂದಲೇ ಹೊರ ಬಿದ್ದಿದೆ.

ವಿಂಡೋ ಸೀಟ್ ಅನ್ನೋದೊಂದು ರೊಮ್ಯಾಂಟಿಕ್ ಥ್ರಿಲ್ಲರ್ ಕಥಾಹಂದರದ ಚಿತ್ರ. ಸಂಕೀರ್ಣ ಕಥೆಯನ್ನ ಚೇತೋಹಾರಿಯಾಗಿಯೇ ಸಿನಿಮಾ ಚೌಕಟ್ಟಿಗೆ ಒಗ್ಗಿಸುವ ಸವಾಲನ್ನು ಶೀತಲ್ ಇಲ್ಲಿ ಸ್ವೀಕರಿಸಿದ್ದಾರಂತೆ. ಈ ಕಥೆಯಲ್ಲಿ ನಾಯಕ ನಿರೂಪ್ ಭಂಡಾರಿ ಗಿಟಾರಿಸ್ಟ್ ಆಗಿ ನಟಿಸಿದ್ದಾರೆ. ಅದಕ್ಕೆ ಪೂರಕವಾಗಿ ಈ ಸಿನಿಮಾವನ್ನ ಮ್ಯೂಸಿಕಲ್ ಹಿಟ್ ಆಗಿಸೋ ಜವಾಬ್ದಾರಿಯನ್ನ ಅರ್ಜುನ್ ಜನ್ಯಾ ವಹಿಸಿಕೊಂಡಿದ್ದಾರೆ.

ಈಗಾಗಲೇ ಅರ್ಜುನ್ ಜನ್ಯಾರ ಕೆಲಸ ಆರಂಭವಾಗಿದೆ. ಜನ್ಯಾ ತನ್ಮಯರಾಗಿ ಸಂಗೀತ ಪಟ್ಟು ಹಾಕುತ್ತಿರೋದರ ಬಗೆಗಿನ ವಿಡಿಯೋ ಒಂದನ್ನು ಶೀತಲ್ ಹಂಚಿಕೊಂಡಿದ್ದಾರೆ. ಅವರ ಪ್ರತಿಭೆ, ಕೆಲಸದ ಬಗ್ಗೆಯೂ ಬೆರಗಿನ ಮಾತುಗಳನ್ನಾಡಿದ್ದಾರೆ. ಜನ್ಯಾರ ಪ್ರತಿಭೆಯಿಂದಲೇ ವಿಂಡೋ ಸೀಟ್ ಮತ್ತಷ್ಟು ಆಕರ್ಷಣೀಯವಾಗುತ್ತಿರೋದರ ಬಗ್ಗೆಯೂ ಶೀತಲ್ ಥ್ರಿಲ್ ಆದಂತಿದ್ದಾರೆ.

ಈ ಸಿನಿಮಾದ ಹೀರೋ ಗಿಟಾರಿಸ್ಟ್ ಎಂಬ ವಿಚಾರವೇ ಇಲ್ಲಿ ಸಂಗೀತದ ಮಹತ್ವ ಅದೆಷ್ಟಿದೆ ಅನ್ನೋದರ ಸಂಕೇತ. ಕಥೆಯಲ್ಲಿಯೇ ಸಂಗೀತ ಹೊಸೆದುಕೊಂಡಿದ್ದಾಗ ಅದು ಸಂಗೀತ ನಿರ್ದೇಶಕನ ಪಾಲಿಗೂ ಸವಾಲು. ಅದನ್ನು ಅರ್ಜುನ್ ಜನ್ಯಾ ಖುಷಿಯಿಂದಲೇ ಸ್ವೀಕರಿಸಿದ್ದಾರೆ. ಕಥೆಯನ್ನು ಬಹುವಾಗಿ ಮೆಚ್ಚಿಕೊಳ್ಳುತ್ತಲೇ ವಿಂಡೋ ಸೀಟ್ ಅನ್ನು ರಾಗಗಳಿಂದ ಕಳೆಗಟ್ಟಿಸೋ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ಜಾಕ್ ಮಂಜು ನಿರ್ಮಾಣ ಮಾಡಿರುವ ವಿಂಡೋ ಸೀಟ್ ಕೊರೊನಾ ಕಾಲದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಪ್ರಧಾನವಾದದ್ದು. ಲಾಕ್‍ಡೌನ್ ಆರಂಭವಾಗೋದಕ್ಕೂ ಮುಂಚಿತವಾಗಿಯೇ ಇದರ ಚಿತ್ರೀಕರಣವನ್ನ ಶೀತಲ್ ಮುಗಿಸಿಕೊಂಡಿದ್ದರು. ಯಾವುದೇ ಸದ್ದುಗದ್ದಲವಿಲ್ಲದೆ ಇತ್ತೀಚೆಗೆ ಪೋಸ್ಟ್ ಪ್ರೊಡಕ್ಷನ್ ಅನ್ನೂ ಆರಂಭಿಸಿದ್ದರು. ಅರ್ಜುನ್ ಜನ್ಯಾ ಎಂಟ್ರಿಯ ಮೂಲಕ ಅದೀಗ ನಿರ್ಣಾಯಕ ಹಂತ ತಲುಪಿಕೊಂಡಿದೆ. ಇಷ್ಟರಲ್ಲಿಯೇ ಶೀತಲ್ ಕಡೆಯಿಂದ ಮತ್ತೊಂದಷ್ಟು ಸಿಹಿ ಸುದ್ದಿಗಳು ರವಾನೆಯಾಗೋ ನಿರೀಕ್ಷೆಗಳಿದ್ದಾವೆ.

Comments

Leave a Reply

Your email address will not be published. Required fields are marked *