‘ವಾಯುಪುತ್ರ’ನಾಗಿ ಚಂದನವನದಲ್ಲಿ ‘ಚಿರು’ ಛಾಪು

– ನೆನಪಾಗಿಯೇ ಉಳಿದ ಚಿರಂಜೀವಿ ಕನಸು

ಬೆಂಗಳೂರು: ಚಂದನವನದ ಪ್ರತಿಭಾನ್ವಿತ ನಟ ಸರ್ಜಾ ಕುಟುಂಬದ ಕುಡಿ ಚಿರಂಜೀವಿ ಚಿರನಿದ್ರೆಗೆ ಜಾರಿದ್ದಾರೆ. ‘ವಾಯುಪುತ್ರ’ನಾಗಿ ಬಂದು ಗಂಡೆದೆ ತೋರಿದ ನಟ ಬದುಕಿನ ಆಟ ನಿಲ್ಲಿಸಿದ್ದಾರೆ. ಹಲವು ಚಿತ್ರಗಳಲ್ಲಿ ಅಮೋಘ ಅಭಿನಯ ನೀಡಿದ ನಟ ಚಿರು ಇನ್ನೂ ನೆನಪಷ್ಟೇ.

ಚಿರಂಜೀವಿ ಸರ್ಜಾ 1980 ಅಕ್ಟೋಬರ್ 17ರಂದು ಬೆಂಗಳೂರಿನಲ್ಲಿ ಜನಿಸಿದ್ದರು. ಕನ್ನಡದ ಖಳನಟ ಶಕ್ತಿ ಪ್ರಸಾದ್ ಮೊಮ್ಮಗನಾಗಿದ್ದು, ನಟ ಅರ್ಜುನ್ ಸರ್ಜಾ ಅವರ ಸೋದರಳಿಯ ಆಗಿದ್ದಾರೆ. ‘ವಾಯುಪುತ್ರ’ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಪದಾರ್ಪಣೆ ಮಾಡಿದ್ದರು. ನಂತರ ಗಂಡೆದೆ, ಚಿರು, ದಂಡಂ ದಶಗುಣಂ, ಕೆಂಪೇಗೌಡ, ವರದನಾಯಕ, ವಿಸಲ್, ಚಂದ್ರಲೇಖ, ಅಜಿತ್, ಆಟಗಾರ, ರಾಮಲೀಲಾ, ಅಮ್ಮ ಐ ಲವ್ ಯು ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರು. ಚಿಕ್ಕ ವಯಸ್ಸಿನ ಚಿರಂಜೀವಿ ‘ಚಿರು’ ಚಿತ್ರದಿಂದ ಅತಿ ಹೆಚ್ಚು ಖ್ಯಾತಿಗಳಿಸಿದ್ದರು.

ಚಿರು ಸಿನಿರಂಗಕ್ಕೆ ಬರಲು ಕಾರಣ ಮಾವ ಅರ್ಜುನ್ ಸರ್ಜಾ:
ಚಿರು ಸಿನಿರಂಗಕ್ಕೆ ಮಾವ ಅರ್ಜುನ್ ಸರ್ಜಾರಿಂದ ಎಂಟ್ರಿ ಕೊಟ್ಟಿದ್ದರು. ಅದಕ್ಕೂ ಮೊದಲು 2006 ರಿಂದ ಸುಮಾರು 4 ವರ್ಷಗಳ ಕಾಲ ಸೋದರ ಮಾವ ಅರ್ಜುನ್ ಸರ್ಜಾ ಜೊತೆಯಲ್ಲೇ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು.

ಧೃವ ಸರ್ಜಾ ಹಾಗೂ ಅರ್ಜುನ್ ಸರ್ಜಾ ಜೊತೆ ಸೇರಿ ಒಟ್ಟಿಗೆ ಸಿನಿಮಾ ಮಾಡಬೇಕು ಅನ್ನೋ ಕನಸು ಕಂಡಿದ್ದರು. ಒಳ್ಳೆಯ ಕಥೆ ಬೇಕು, ಮೂರು ಪಾತ್ರಗಳಿಗೂ ಅಷ್ಟೇ ಪ್ರಾಮುಖ್ಯತೆ ಇರಬೇಕು. ಆ ರೀತಿಯ ಕಥೆ ಸಿಕ್ಕರೆ ಖಂಡಿತಾ ಸಿನಿಮಾ ಮಾಡುತ್ತೀವಿ. ಅದು ಸಿನಿಮಾ ಆಗುತ್ತೆ ಅನ್ನೋದಕ್ಕಿಂತ ಯಾವತ್ತಿಗೂ ನೆನಪಲ್ಲಿ ಉಳಿಯುವಂತಹದ್ದಾಗಿರಬೇಕು ಎಂದು ಕನಸು ಕಂಡಿದ್ದರು. ಆದರೆ ಅರ್ಧದಾರಿಯಲ್ಲಿ ಎಲ್ಲಾ ಕನಸುಗಳನ್ನ ಬಿಟ್ಟು ದೂರ ಸಾಗಿದ್ದಾರೆ.

ವಾಯುಪತ್ರ ಸಿನಿಮಾದಿಂದ ಶುರುವಾದ ಚಿರು ಜರ್ನಿ ಶಿವಾರ್ಜುನದವರೆಗೂ ಮುಂದುವರಿದಿತ್ತು. ಚಿರು ಅಭಿನಯದ ‘ಶಿವಾರ್ಜುನ’ ಚಿತ್ರ ಕೊನೆಯದಾಗಿ ರಿಲೀಸ್ ಆಗಿತ್ತು. ಆದರೆ ಈ ಸಿನಿಮಾ ರಿಲೀಸ್ ಆದ ಒಂದೇ ವಾರಕ್ಕೆ ಲಾಕ್‍ಡೌನ್ ಘೋಷಣೆಯಾಯಿತು. ಲಾಕ್‍ಡೌನ್ ಮುಗಿದ ಬಳಿಕ ಸಿನಿಮಾ ರಿಲೀಸ್ ಮಾಡುವ ಪ್ಲ್ಯಾನ್ ಇತ್ತು. ಆದರೆ ಅಷ್ಟರಲ್ಲೇ ಚಿರಂಜೀವಿ ವಿಧಿವಶರಾಗಿದ್ದಾರೆ.

Comments

Leave a Reply

Your email address will not be published. Required fields are marked *