ವಾಟ್ಸಪ್ ಸ್ಟೇಟಸ್ ಮತ್ತೆ 30 ಸೆಕೆಂಡ್‍ಗೆ ಏರಿಕೆ

ನವದೆಹಲಿ: ಅಧಿಕ ಬಳಕೆದಾರರನ್ನು ಹೊಂದಿರುವ ಆ್ಯಪ್ ವಾಟ್ಸಪ್ ಮತ್ತೆ ಸ್ಟೇಟಸ್ ಮಿತಿಯನ್ನು 30 ಸೆಕೆಂಡ್‍ಗೆ ಏರಿಕೆ ಮಾಡಿದೆ.

ಸುಮಾರು ಎರಡು ತಿಂಗಳಿಂದ 15 ಸೆಕೆಂಡ್‍ಗೆ ಇಳಿಕೆಯಾಗಿದ್ದ ಸ್ಟೇಟಸ್ ಮಿತಿ ಸದ್ಯ ಏರಿಕೆಯಾಗಿದ್ದು ಬಳಕೆದಾರರಿಗೆ ಖುಷಿ ವಿಚಾರವಾಗಿದೆ. ಜೊತೆಗೆ ಹೊಸ ಆಂಡ್ರಾಯ್ಡ್ ವಾಟ್ಸಪ್ 2.20.166 ಆವೃತ್ತಿ ಅಪ್‍ಡೇಟ್ ಬಿಡುಗಡೆ ಮಾಡುತ್ತಿದ್ದು, ಈಗಾಗಲೇ ಬಳಕೆದಾರರಿಗೆ ಹಂತಹಂತವಾಗಿ ಲಭ್ಯವಾಗುತ್ತಿದೆ.

ವಿಶ್ವದಲ್ಲಿ ಲಾಕ್‍ಡೌನ್ ಘೋಷಣೆಯಾದ ಬಳಿಕ ಹೆಚ್ಚಿನ ಜನರು ಮನೆಯಲ್ಲೇ ಇರಬೇಕಾಗಿದ್ದರಿಂದ ಇಂಟರ್ನೆಟ್ ಬಳಕೆ ಹೆಚ್ಚಾಗಿತ್ತು. ಆದರಲ್ಲೂ ವಾಟ್ಸಪ್ ಚಾಟ್ ಮಾಡುವವರ, ಪೋಸ್ಟ್, ವಿಡಿಯೋ ಸ್ಟೇಟಸ್ ಹಾಕುವವರ ಸಂಖ್ಯೆ ಗಣನೀಯ ಪ್ರಮಾಣಲ್ಲಿ ಏರಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ವರ್ ಗೆ ಬೀಳುತ್ತಿರುವ ಟ್ರಾಫಿಕ್ ಒತ್ತಡವನ್ನು ಕಡಿಮೆ ಮಾಡಲು ವಾಟ್ಸಪ್ ಸ್ಟೇಟಸ್ ಮಿತಿಯನ್ನು 30 ಸೆಕೆಂಡ್‍ನಿಂದ 15 ಸೆಕೆಂಡ್‍ಗೆ ಇಳಿಸಿತ್ತು.

ವಾಟ್ಸಪ್ 2017ರಲ್ಲಿ ತನ್ನ ಬಳಕೆದಾರರಿಗೆ 24 ಗಂಟೆಗಳ ನಂತರ ಕಣ್ಮರೆಯಾಗುವ ಫೋಟೋಗಳು, ವಿಡಿಯೋಗಳು ಮತ್ತು ಜಿಫ್ ಫೈಲ್‍ಗಳನ್ನು ಅಪ್‍ಲೋಡ್ ಮಾಡಲು ವಿಶಿಷ್ಟ ವೇದಿಕೆ ಕಲ್ಪಿಸಿತ್ತು. ಆರಂಭದ ಸಮಯದಲ್ಲಿ ವಾಟ್ಸಪ್ ಸ್ಟೇಟಸ್ 90 ಸೆಕೆಂಡ್‍ಗಳ ಮೂರು ನಿಮಿಷಗಳ ವಿಡಿಯೋ ಒಳಗೊಂಡಿತ್ತು. ಅಲ್ಲದೆ ವಿಡಿಯೋ ಫೈಲ್ 16ಎಂಬಿಗಿಂತ ದೊಡ್ಡದಾಗಿದ್ದರೆ ಅದನ್ನು ಪೋಸ್ಟ್ ಮಾಡುವ ಮೊದಲು ವಿಡಿಯೋದ ಉದ್ದವನ್ನು ಕಡಿಮೆಗೊಳಿಸುವ ಆಯ್ಕೆಯನ್ನು ನೀಡಿತ್ತು. ನಂತರ ಮಿತಿಯನ್ನು 30 ಸೆಕೆಂಡ್‍ಗಳಿಗೆ ಇಳಿಸಲಾಯಿತು.

ಕೊರೊನಾದಿಂದ ವಿಶ್ವಾದ್ಯಂತ ಹಲವು ರಾಷ್ಟ್ರಗಳು ಲಾಕ್‍ಡೌನ್ ಘೋಷಿಸಿದ ಪರಿಣಾಮ ನೆಟ್ ಬಳಕೆ ಹೆಚ್ಚಾಗಿದೆ. ನೆಟ್‍ಫ್ಲಿಕ್ಸ್, ಹಾಟ್ ಸ್ಟಾರ್, ಅಮೆಜಾನ್ ಪ್ರೈಂ, ಸಾಮಾಜಿಕ ಜಾಲತಾಣ ಕಂಪನಿಗಳ ವಿಡಿಯೋಗಳು ರೆಸೊಲ್ಯೂಷನ್ ಕಡಿಮೆ ಮಾಡಿವೆ.

Comments

Leave a Reply

Your email address will not be published. Required fields are marked *