ವಾಟ್ಸಪ್‍ನಲ್ಲಿ ಪತಿ ಬ್ಯುಸಿ – ಸೆಲ್ಫಿ ಕ್ಲಿಕ್ಕಿಸ್ತಿರೋವಾಗ್ಲೇ ನೀರಿಗೆ ಬಿದ್ದ ಮಹಿಳೆ

– ಗಂಡನೊಂದಿಗೆ ಟ್ರಿಪ್ ಹೋಗಿದ್ದವಳು ವಾಪಸ್ ಬರಲೇ ಇಲ್ಲ

ಭೋಪಾಲ್: ಮಹಿಳೆಯೊಬ್ಬಳು ಸೆಲ್ಫಿ ಕ್ಲಿಕ್ಕಿಸುವಾಗ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಹಲಾಲಿ ಡ್ಯಾಂನಲ್ಲಿ ನಡೆದಿದೆ.

ಹಿಮಾನಿ ಮಿಶ್ರಾ (33) ಮೃತ ಮಹಿಳೆ. ಈಕೆ ತನ್ನ ಪತಿ ಡಾ.ಉತ್ಕರ್ಶ್ ಮಿಶ್ರಾ ಜೊತೆ ಭಾನುವಾರ ಹಲಾಲಿ  ಡ್ಯಾಂಗೆ ಹೋಗಿದ್ದರು. ಈ ವೇಳೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಈ ದುರಂತ ನಡೆದಿದೆ.

ಮಧ್ಯಪ್ರದೇಶದ ನಿವಾಸಿ ಡಾ.ಉತ್ಕರ್ಶ್ ಮಿಶ್ರಾ 9 ವರ್ಷಗಳ ಹಿಂದೆ ಹಿಮಾನಿ ಅವರನ್ನು ವಿವಾಹವಾಗಿದ್ದರು. ಮಿಶ್ರಾ ಭೋಪಾಲ್‍ನ ವೀಣಾವಾದಿನಿ ಕಾಲೇಜಿನಲ್ಲಿ ಆಯುರ್ವೇದ ವೈದ್ಯರಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಭಾನುವಾರ ದಂಪತಿ ಹಲಾಲಿ ಡ್ಯಾಂಗೆ ಹೋಗಿದ್ದಾರೆ. ತುಂಬಾ ಸಮಯದವರೆಗೂ ಇಬ್ಬರೂ ಸುತ್ತಾಡಿದ್ದಾರೆ. ಜೊತೆಗೆ ಎಲ್ಲಾ ಕಡೆ ಅನೇಕ ಫೋಟೋಗಳನ್ನು ತೆಗೆದುಕೊಂಡಿದ್ದಾರೆ.

ದಂಪತಿ ಹಲಾಲಿ ಡ್ಯಾಂ ಕೆಳಭಾಗದಿಂದ ಮೇಲೆ ಹೋಗಲು ಪ್ರಾರಂಭಿಸಿದ್ದರು. ಪತಿ ತಮ್ಮ ಮೊಬೈಲಿನಲ್ಲಿ ವಾಟ್ಸಪ್ ನೋಡುತ್ತಿದ್ದರು. ಇತ್ತ ಹಿಮಾನಿ ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದರು. ಈ ವೇಳೆ ಮೇಲೆ ಹತ್ತುವಾಗ ಹಿಮಾನಿ ಕಾಲು ಜಾರಿ ಡ್ಯಾಂಗೆ ಬಿದ್ದಿದ್ದಾಳೆ. ಹೆಚ್ಚಾಗಿ ನೀರು ಇದ್ದುದ್ದರಿಂದ ಹಿಮಾನಿ ಕೊಚ್ಚಿಕೊಂಡು ಮುಂದೆ ಹೋಗಿದ್ದು, ಸ್ವಲ್ಪ ದೂರದವರೆಗೂ ಕಾಣಿಸಿಕೊಂಡಿದ್ದಾಳೆ. ನಂತರ ಹಿಮಾನಿ ಕಣ್ಮರೆಯಾಗಿದ್ದಾಳೆ.

ತಕ್ಷಣ ಪತಿ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅವರು ಪೊಲೀಸರಿಗೆ ಫೋನ್ ಮಾಡಿ ಈ ಬಗ್ಗೆ ತಿಳಿಸಿದ್ದಾರೆ. ಮಾಹಿತಿಯ ಮೇರೆಗೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ರಾತ್ರಿಯವರೆಗೂ ಶೋಧಕಾರ್ಯ ನಡೆಸಿದ್ದಾರೆ. ಆದರೆ ಎಲ್ಲೂ ಹಿಮಾನಿ ಪತ್ತೆಯಾಗಿರಲಿಲ್ಲ. ಸತತ 16 ಗಂಟೆಗಳ ನಂತರ ಹಿಮಾನಿಯ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಲಾಲಿ ಡ್ಯಾಮ್ ನೋಡಲು ಹೆಚ್ಚಿನ ಸಂಖ್ಯೆಯ ಜನರು ಬರುತ್ತಾರೆ. ಆದರೆ ಇಲ್ಲಿ ಯಾವುದೇ ಭದ್ರತಾ ವ್ಯವಸ್ಥೆ ಇಲ್ಲ. ಹೀಗಾಗಿ ಇಲ್ಲಿಗೆ ಬರುವ ಜನರು ತಮಗೆ ಇಷ್ಟ ಬಂದ ಸ್ಥಳಕ್ಕೆ ಹೋಗಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ಒಂದು ವೇಳೆ ನೀರು ತುಂಬಾ ಹೆಚ್ಚಾಗಿದ್ದರೆ ಈ ರೀತಿಯ ಅವಘಡ ಸಂಭವಿಸುತ್ತವೆ. ಕಳೆದ ವರ್ಷ ನಾಲ್ವರು ಸಾವನ್ನಪ್ಪಿದ್ದಾರೆ  ಎಂದು ಸ್ಥಳೀಯರು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *