ವಸತಿ ಕಟ್ಟಡದ ಸ್ಲ್ಯಾಬ್ ಕುಸಿದು ಆರು ಮಂದಿ ದಾರುಣ ಸಾವು

– ಮುಂದುವರಿದ ರಕ್ಷಣಾ ಕಾರ್ಯ

ಮುಂಬೈ: ವಸತಿ ಕಟ್ಟಡದ ಸ್ಲ್ಯಾಬ್ ಕುಸಿತಗೊಂಡು ಆರು ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ವರದಿಯಾಗಿದೆ. ಕಟ್ಟಡದಡಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಉಲ್ಹಾಸ್ ನಗರದ ಮಹಾನಗರ ಪಾಲಿಕೆಯ ಅಧಿಕಾರಿಗಳ ಮಾಹಿತಿ ಪ್ರಕಾರ, ನೆಹರೂ ಚೌಕ್ ಪ್ರದೇಶದ ಸಾಯಿ ಸಿದ್ಧಿ ಕಟ್ಟಡದ ಐದನೇ ಮಹಡಿಯ ಸ್ಲ್ಯಾಬ್ ಕುಸಿದ ಪರಿಣಾಮ ದುರಂತ ಸಂಭವಿಸಿದೆ. ಕಟ್ಟಡದ ಅವಶೇಷಗಳಿಂದ 6 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮತ್ತಷ್ಟು ಮಂದಿ ಸಿಲುಕಿರುವುದಾಗಿ ಶಂಕಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

ರಕ್ಷಣಾ ತಂಡಗಳು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಮೃತಪಟ್ಟ ಆರು ಮಂದಿಯನ್ನು ಪುನೀತ್ ಚಂದ್ವಾನಿ, ದಿನೇಶ್ ಚಂದ್ವಾನಿ, ದೀಪಕ್ ಚಂದ್ವಾನಿ, ಮೋಹಿನಿ ಚಂದ್ವಾನಿ, ಕೃಷ್ಣ ಬಜಾಜ್ ಮತ್ತು ಅಮೃತ ಬಜಾಜ್ ಎಂದು ಗುರುತಿಸಲಾಗಿದೆ.

ಈ ಕಟ್ಟಡವನ್ನು 1995ರಲ್ಲಿ ಕಟ್ಟಡಲಾಗಿದೆ. ಕಟ್ಟಡದ 5ನೇ ಅಂತಸ್ತಿನ ಸ್ಲ್ಯಾಬ್ ಏಕಾಏಕಿ ಕುಸಿತಗೊಂಡಿದೆ. ಈ ಮೂಲಕ ಒಂದೇ ತಿಂಗಳಲ್ಲಿ ನಗರದಲ್ಲಿ ಎರಡನೇ ದುರಂತ ಸಂಭವಿಸಿದೆ. ಮೇ 15ರಂದು ಉಲ್ಹಾಸ್‍ನಗರದಲ್ಲಿ ವಸತಿ ಕಟ್ಟಡ ಕುಸಿತಗೊಂಡು 5 ಮಂದಿ ಮರಣ ಹೊಂದಿದ್ದರು.

Comments

Leave a Reply

Your email address will not be published. Required fields are marked *