ಲ್ಯಾಂಡ್‌ಲೈನ್‌ನಿಂದ ಮೊಬೈಲಿಗೆ ಕರೆ – ಆರಂಭದಲ್ಲಿ’0′ ಒತ್ತುವುದು ಕಡ್ಡಾಯ

ನವದೆಹಲಿ: ಜನವರಿ 15 ರಿಂದ ಲ್ಯಾಂಡ್‌ಲೈನ್‌ ಫೋನಿನಿಂದ ಯಾವುದೇ ಕಂಪನಿಯ ಮೊಬೈಲ್‌ ಸಂಖ್ಯೆಗೆ ಕರೆ ಮಾಡಬೇಕಾದರೆ ಆರಂಭದಲ್ಲಿ ‘0’ ಸಂಖ್ಯೆ ಒತ್ತುವುದನ್ನು ಕಡ್ಡಾಯ ಮಾಡಲಾಗಿದೆ.

ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್‌) ಲ್ಯಾಂಡ್‌ಲೈನ್‌ನಿಂದ ಮೊಬೈಲ್‌ಗೆ ಕರೆ ಮಾಡುವ ಮುನ್ನ ʼ0ʼಯನ್ನು ಡಯಲ್‌ ಮಾಡಬೇಕೆಂದು ದೂರಸಂಪರ್ಕ ಸಚಿವಾಲಯಕ್ಕೆ ಮೇ 29 ರಂದು ಶಿಫಾರಸು ಮಾಡಿತ್ತು. ನವೆಂಬರ್‌ 20 ರಂದು ಸುತ್ತೋಲೆ ಹೊರಡಿಸಿ ಟ್ರಾಯ್ ಈ‌ ಶಿಫಾರಸನ್ನು ಜಾರಿಗೆ ತರುವುದಾಗಿ ಹೇಳಿದೆ.

ಗ್ರಾಹಕರು ಆರಂಭದಲ್ಲಿ ‘0’ ಸಂಖ್ಯೆಯನ್ನು ಒತ್ತದೇ ಕರೆ ಮಾಡಿದರೆ ವಾಯ್ಸ್‌ ರೆಕಾರ್ಡ್‌ ಮೂಲಕ ‘0’ ಒತ್ತುವಂತೆ ಮಾಹಿತಿ ನೀಡಬೇಕೆಂದು ಕಂಪನಿಗಳಿಗೆ ಸೂಚಿಸಲಾಗಿದೆ. ಇದನ್ನೂ ಓದಿ: ಕೆಲವರ ಹಿತಾಸಕ್ತಿಗೆ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆ ವಿಳಂಬ – ಕೇಂದ್ರಕ್ಕೆ ಜಿಯೋ ಪತ್ರ

ಯಾಕೆ ಈ ಬದಲಾವಣೆ?
ಭವಿಷ್ಯದಲ್ಲಿ ಮೊಬೈಲ್ ಮತ್ತು ಲ್ಯಾಂಡ್‌ಲೈನ್ ಸೇವೆಗಳಿಗೆ ಸಾಕಷ್ಟು ಸಂಖ್ಯೆಗಳನ್ನು ರಚಿಸಲು ಈ ನಿರ್ಧಾರದಿಂದ ಸಹಾಯವಾಗಲಿದೆ. ಪ್ರಸ್ತುತ ದೇಶದಲ್ಲಿ ಮೊಬೈಲ್‌ಗಳಿಗೆ 10 ಸಂಖ್ಯೆಗಳನ್ನು ನೀಡಲಾಗುತ್ತದೆ. ಮುಂದೆ ಬೇಡಿಕೆ ಹೆಚ್ಚಾದರೆ 11 ಸಂಖ್ಯೆಗಳನ್ನು ನೀಡಬೇಕಾಗಬಹುದು.

ಪ್ರಸ್ತುತ ದೇಶದಲ್ಲಿ ಮೊಬೈಲ್‌ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಬದಲಾವಣೆ ಮಾಡಿದರೆ 254.4 ಕೋಟಿ ಹೆಚ್ಚುವರಿ ಸಂಖ್ಯೆಗಳನ್ನುನೀಡಲು ಸಹಾಯವಾಗುತ್ತದೆ.

ಈ ವಿಚಾರದ ಬಗ್ಗೆ ಜೂನ್‌ ತಿಂಗಳಿನಲ್ಲಿ ಟ್ರಾಯ್‌ ಪ್ರತಿಕ್ರಿಯಿಸಿ, ಸದ್ಯಕ್ಕೆ 11 ಅಂಕೆಗಳಿಗೆ ಮೊಬೈಲ್‌ ಸಂಖ್ಯೆಗಳನ್ನು ಏರಿಸುವ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿತ್ತು.

Comments

Leave a Reply

Your email address will not be published. Required fields are marked *