ಲೈಂಗಿಕ ಕಿರುಕುಳ ನೀಡಿದ ವೈದ್ಯನ ಮೇಲೆ ಹಲ್ಲೆ- ಮಹಿಳೆಯ ವಿರುದ್ಧ ಪ್ರತಿದೂರು ದಾಖಲು

ಹುಬ್ಬಳ್ಳಿ: ಧಾರವಾಡ ಮಹಾನಗರ ಪಾಲಿಕೆ ವೈದ್ಯಾಧಿಕಾರಿ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಮಹಿಳೆ ಸೇರಿದಂತೆ 6 ಜನರ ಮೇಲೆ ಪ್ರತಿ ದೂರು ದಾಖಲಾಗಿದೆ.

ಚಿಟಗುಪ್ಪಿ ಆಸ್ಪತ್ರೆಯ ವೈದ್ಯೆ ಡಾ.ಕೋಮಲ್ ಪ್ರತಿ ದೂರು ನೀಡಿದ್ದಾರೆ. ಲೈಂಗಿಕ ಕಿರುಕುಳ ನೀಡಿದ ಆರೋಪ ಮಾಡಿದ ಮಹಿಳೆ ಹಾಗೂ ಆಕೆಯ ಸಹೋದರ ಸಂತೋಷ ಚೌಹಾಣ ವಿರುದ್ಧ ಉಪನಗರ ಠಾಣೆಯಲ್ಲಿ ಸರ್ಕಾರಿ ಕೆಲಸಕ್ಕೆ ಅಡ್ಡಿ ಮಾಡಿದ್ದಾರೆ ಎಂದು ಉಪನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಜೂನ್ 19 ರಂದು ರಾತ್ರಿ ಮಹಿಳೆ ಮತ್ತು ಸಹೋದರ ಸೇರಿದಂತೆ ಸಂಬಂಧಿಕರು ಚಿಟಗುಪ್ಪಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಪ್ರಭು ಬಿರಾದರ್ ಮೇಲೆ ಹಲ್ಲೆ ಮಾಡಿದ್ದರು. ಇದಲ್ಲದೆ ಆಸ್ಪತ್ರೆಯಲ್ಲಿ ಗದ್ದಲ ಗಲಾಟೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಯನ್ನುಂಟು ಮಾಡಿದ್ದರು.

ಹಲ್ಲೆ ನಡೆಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದು, ನಂತರ ವೈದ್ಯಾಧಿಕಾರಿ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. ಇದಕ್ಕೆ ಪ್ರತಿಯಾಗಿ ಆಸ್ಪತ್ರೆಯ ವೈದ್ಯೆ ಆರೋಪ ಮಾಡಿದ ಮಹಿಳೆ ಹಾಗೂ ಸಂಬಂಧಿಗಳ ವಿರುದ್ಧ ದೂರು ದಾಖಲಾಗಿದ್ದು, ಪ್ರಕರಣ ಮತ್ತಷ್ಟು ಜಟಿಲವಾಗುತ್ತಿದೆ.

ಏನಿದು ಪ್ರಕರಣ?
ಜ್ಯೋತಿ (ಹೆಸರು ಬದಲಾಯಿಸಲಾಗಿದೆ) ಎಂಬವರು ಫಾರ್ಮಾಸಿಟಿಕಲ್ ಎಜೆನ್ಸಿಯ ಮಾಲೀಕರಾಗಿದ್ದು, ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಯ ಪ್ರಭು ಆಸ್ಪತ್ರೆಗೆ ವೈದ್ಯಕೀಯ ಸಾಮಾಗ್ರಿಗಳನ್ನು ಪೂರೈಕೆ ಮಾಡಿದ್ದರು. ವಸ್ತುಗಳನ್ನು ಪಡೆದ ಪ್ರಭು ಹಣ ಪಾವತಿ ಮಾಡಿರಲಿಲ್ಲ. ಬಿಲ್ ಪಾವತಿ ಮಾಡಬೇಕಾದರೆ ಲಾಡ್ಜ್ ಗೆ ಬಾ ಎಂದು ಪ್ರಭು ಅಸಭ್ಯವಾಗಿ ನಡೆದುಕೊಂಡಿದ್ದಾನೆ ಎಂದು ಜ್ಯೋತಿ ಆರೋಪಿಸಿದ್ದರು.

ಜ್ಯೋತಿ ತಮಗಾದ ಕೆಟ್ಟ ಅನುಭವವನ್ನು ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಕುಟುಂಬಸ್ಥರ ಆಸ್ಪತ್ರೆಯೊಳಗೆ ನುಗ್ಗಿ ವೈದ್ಯನ ಮೇಲೆ ಹಲ್ಲೆಗೆ ಮುಂದಾಗಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಉಪನಗರ ಠಾಣೆಯ ಪೊಲೀಸರು ಆರೋಪಿ ವೈದ್ಯನನ್ನು ಬಂಧಿಸಿದ್ದರು. ಕಿರುಕುಳಕ್ಕೊಳಗಾದ ಮಹಿಳೆ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದರು.

Comments

Leave a Reply

Your email address will not be published. Required fields are marked *