ಲಾಕ್‍ಡೌನ್ 5.0- ಪ್ರಮುಖ 13 ನಗರಗಳಲ್ಲಿ ಮಾತ್ರ ಕಟ್ಟುನಿಟ್ಟಿನ ಕ್ರಮ?

– ಹೋಟೆಲ್, ರೆಸ್ಟೋರೆಂಟ್, ಮಾಲ್ ತೆರೆಯುವ ಸಾಧ್ಯತೆ

ನವದೆಹಲಿ: ಕೊರೊನಾ 4ನೇ ಹಂತದ ಲಾಕ್‍ಡೌನ್ ಭಾನುವಾರ ಮುಕ್ತಾಯವಾಗಲಿದ್ದು, ಜೂನ್ 1ರಿಂದ 5ನೇ ಹಂತದ ಲಾಕ್‍ಡೌನ್ ಜಾರಿಗೆ ಬರಲಿದೆ. ಜೂನ್ 15ರವರೆಗೂ 5ನೇ ಹಂತದ ಲಾಕ್‍ಡೌನ್ ವಿಸ್ತರಣೆಯಾಗಬಹುದು. ಆದರೆ ಇದು ಕೇವಲ 13 ಮಹಾ ನಗರಗಳಿಗಳಿಗೆ ಮಾತ್ರ ಸೀಮಿತವಾಗುವ ಸಾಧ್ಯತೆ ಇದೆ. ಉಳಿದೆಡೆ ಮತ್ತಷ್ಟು ವಿನಾಯಿತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ದೆಹಲಿ, ಮುಂಬೈ, ಚೆನ್ನೈ, ಅಹಮದಾಬಾದ್, ಥಾಣೆ, ಪುಣೆ, ಹೈದರಾಬಾದ್, ಕೋಲ್ಕತಾ/ಹೌರಾ, ಇಂಧೂರ್, ಜೈಪುರ, ಜೋಧ್ಪುರ್, ಚೆಂಗಾಲಪಟ್ಟು ಮತ್ತು ತಿರುವಳ್ಳೂರುನಲ್ಲಿ ಅತಿ ಹೆಚ್ಚು ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಈ ನಗರಗಳಲ್ಲಿ ಮಾತ್ರ ಲಾಕ್‍ಡೌನ್ ಜಾರಿಯಾಗಬಹುದು ಎಂದು ಹೇಳಲಾಗುತ್ತಿದೆ.

ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು ಹೋಟೆಲ್, ರೆಸ್ಟೋರೆಂಟ್, ಮಾಲ್ ತೆರೆಯಲು ಅವಕಾಶ ನೀಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆಗಿನ ದೂರವಾಣಿ ಮಾತುಕತೆ ವೇಳೆ ಒತ್ತಡ ಹೇರಿದ್ದಾರೆ. ಈ ಹಿನ್ನೆಲೆಯಲ್ಲಿ ಹೋಟೆಲ್, ರೆಸ್ಟೋರೆಂಟ್, ಮಾಲ್ ತೆರೆಯಲು ಅವಕಾಶ ಕೊಡುವ ಸಾಧ್ಯತೆಗಳಿವೆ ಎಂದು ಕೇಂದ್ರ ಸರ್ಕಾರದ ಮೂಲಗಳಿಂದ ಮಾಹಿತಿ ಲಭಿಸಿದೆ.

ಇದರ ಜೊತೆಗೆ ಕಫ್ರ್ಯೂ ಸಮಯ ಕೂಡ ವಿಸ್ತರಣೆಯಾಗುವ ಸಾಧ್ಯತೆ ಇದೆ. ರಾತ್ರಿ 7 ಗಂಟೆಯಿಂದ ಶುರುವಾಗಲಿರುವ ಕಫ್ರ್ಯೂವನ್ನು ಎರಡು ಗಂಟೆಗಳ ವಿಸ್ತರಣೆ ಮಾಡುವ ಸಾಧ್ಯತೆ ಇದೆ. ಹೀಗಾಗಿ ರಾತ್ರಿ 9 ಗಂಟೆಯಿಂದ ಬೆಳಗ್ಗೆ 7 ಗಂಟೆವರೆಗೂ ಕಫ್ರ್ಯೂ ವಿಧಿಸುವ ಚಿಂತನೆ ನಡೆದಿದೆ. ಇದರಿಂದ ಆರ್ಥಿಕ ಚಟುವಟಿಕೆಗಳಿಗೆ ಮತ್ತಷ್ಟು ಅನುಕೂಲ ಮಾಡಿಕೊಟ್ಟಂತಾಗಲಿದೆ.

ರಾಜ್ಯ ಸರ್ಕಾರಗಳಿಗೆ ಕೇಂದ್ರದ ಎಚ್ಚರಿಕೆ:
ದೇಶದ 145 ಜಿಲ್ಲೆಗಳಲ್ಲಿ ಸೋಂಕು ಹೆಚ್ಚಾಗುತ್ತಿದೆ. ಈ ಜಿಲ್ಲೆಗಳ ಕಂಟೈನ್‍ಮೆಂಟ್ ಝೋನ್‍ಗಳಲ್ಲಿ ಎಚ್ಚರಿಕೆ ವಹಿಸದಿದ್ದರೇ ಅಪಾಯ ಎಂದು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಕಳೆದು ಮೂರು ವಾರಗಳಿಂದ 145 ಜಿಲ್ಲೆಗಳಲ್ಲಿ ಸೋಂಕು ಹೆಚ್ಚಾಗಿದೆ. ವಲಸೆ ಕಾರ್ಮಿಕರ ಸಂಚಾರದಿಂದ ಸೋಂಕು ಗ್ರಾಮೀಣ ಪ್ರದೇಶಗಳಿಗೂ ಹರಡಬಹುದು. ಹೀಗಾಗಿ ಸೂಕ್ತ ತಪಾಸಣೆ ಕ್ವಾರಂಟೈನ್ ಮಾಡುವಂತೆ ಸೂಚನೆ ನೀಡಲಾಗಿದೆ.

ಬಿಹಾರ್, ಉತ್ತರ ಪ್ರದೇಶದ, ಜಾರ್ಖಂಡ್, ಗುಜರಾತ್, ಮಹಾರಾಷ್ಟ್ರದಲ್ಲಿ ಕಳೆದ ಮೂರು ವಾರದಿಂದ ಸೋಂಕು ಹೆಚ್ಚಾಗಿದೆ. ಕರ್ನಾಟಕದ ಯಾದಗಿರಿ, ಮಂಡ್ಯ, ಕಲಬುರಗಿ ಕೇಂದ್ರದ ಪಟ್ಟಿಯಲ್ಲಿ ಸ್ಥಾನ ಪಡೆದಿದೆ ಎನ್ನಲಾಗಿದ್ದು ಜಿಲ್ಲೆಗಳ ಪಟ್ಟಿ ಅಧಿಕೃತವಾಗಿ ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಬೇಕಿದೆ.

Comments

Leave a Reply

Your email address will not be published. Required fields are marked *