ಲಾಕ್‍ಡೌನ್ ಸಡಿಲಿಕೆ ಸರ್ಕಾರದ ನಿರ್ಧಾರಕ್ಕೆ ವಿವಿಧ ವಲಯಗಳಿಂದ ಅಸಮಾಧಾನ

ಬೆಂಗಳೂರು: ಜೂನ್ 14 ರಿಂದ ರಾಜ್ಯದಲ್ಲಿ ಲಾಕ್‍ಡೌನ್ ಸಡಿಲಿಕೆಗೆ ಸಂಬಂಧಪಟ್ಟಂತೆ ಕೈಗಾರಿಕಾ ವಲಯವನ್ನು ಹೊರತುಪಡಿಸಿ ವಿವಿಧ ವಲಯಗಳಿಂದ ಅಸಮಾಧಾನ ವ್ಯಕ್ತವಾಗಿದೆ. ಕೆಲ ವಲಯಗಳನ್ನು ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಕೈಗಾರಿಕೆಗಳಿಗೆ 50% ಹಾಜರಾತಿಯಲ್ಲಿ ಅನುಮತಿ ಮಾಡಿದ್ದು ಸ್ವಾಗತಾರ್ಹ. ಪೀಣ್ಯಾ ಕೈಗಾರಿಕಾ ಪ್ರದೇಶದಲ್ಲಿ 8,500 ಸಣ್ಣ, ಮಧ್ಯಮ ಕೈಗಾರಿಕೆಗಳಿವೆ. ಜೂನ್ 14 ರಿಂದ ಎಂದಿನಂತೆ ಕಾರ್ಖಾನೆಗಳು ಪ್ರಾರಂಭವಾಗುತ್ತವೆ. ಈಗಾಗಲೇ ಲಾಕ್‍ಡೌನ್‍ನಿಂದ ತುಂಬಾ ನಷ್ಟ ಅನುಭವಿಸಿದ್ದೇವೆ. ಸಿಎಂ ಕೈಗಾರಿಕೆಗಳಿಗೆ ಅನುಮತಿ ಕೊಟ್ಟಿದ್ದು ಖುಷಿ ಕೊಟ್ಟಿದೆ ಎಂದು ಪೀಣ್ಯಾ ಕೈಗಾರಿಕೆಗಳ ಸಂಘದ ಅಧ್ಯಕ್ಷ ಶ್ರೀನಿವಾಸ್ ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: 11 ಜಿಲ್ಲೆಗಳು ಲಾಕ್ – ನೈಟ್ ಕರ್ಫ್ಯೂ ಜೊತೆಯಲ್ಲಿ ವೀಕೆಂಡ್ ಲಾಕ್‍ಡೌನ್

ಹೋಟೆಲ್ ಗಳಲ್ಲಿ ಕೇವಲ ಪಾರ್ಸೆಲ್ ಮಾತ್ರ ಅವಕಾಶ ಎಂದ ಸರ್ಕಾರದ ಆದೇಶಕ್ಕೆ ಬೇಸರ ವ್ಯಕ್ತಪಡಿಸಿದ ಹೋಟೆಲ್ ಅಸೋಸಿಯೇಷನ್ ನ ಪಿಸಿ ರಾವ್ ಅವರು, ಸರ್ಕಾರ ಹೋಟೆಲ್ ಉದ್ಯಮವನ್ನು ಮುಳುಗಿಸುವ ಕೆಲಸ ಮಾಡುತ್ತಿದೆ. ಕಳೆದ ಒಂದೂವರೆ ವರ್ಷದಿಂದ ಹೋಟೆಲ್ ಉದ್ಯಮ ನಷ್ಟದಲ್ಲಿದೆ. ಹೋಟೆಲ್ ಓಪನ್ ಆದೇಶದ ನಿರೀಕ್ಷೆಯಲ್ಲಿ ಹೋಟೆಲ್ ಉದ್ಯಮವಿತ್ತು. ಆದರೆ ಸರ್ಕಾರ ಹೋಟೆಲ್ ಮಾಲೀಕರು ಹಾಗೂ ಕೆಲಸಗಾರರನ್ನು ಮುಳುಗಿಸುವಂತೆ ಮಾಡಿದೆ. ನಮ್ಮ ಬಗ್ಗೆ ಕಿಂಚಿತ್ತು ಯೋಚಿಸದೇ ನಮ್ಮನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಸಿಎಂ ಹೀಗೆ ಮಾಡ್ತಾರೆ ಎಂದುಕೊಂಡಿರಲಿಲ್ಲ. ನಮಗೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಲಾಕ್‍ಡೌನ್ ವೇಳೆ ಹೇಗಿದೆ ಕಾಡು- ಡ್ರೋನ್ ವೀಡಿಯೋ

ಬೀದಿಬದಿ ವ್ಯಾಪಾರಿ ಸಂಘದ ಅಧ್ಯಕ್ಷರಾದ ರಂಗಪ್ಪ ಮಾತಾನಾಡಿ, ಮುಖ್ಯಮಂತ್ರಿಗಳೇ ಬೀದಿಬದಿ ವ್ಯಾಪಾರಿಗಳನ್ನು ಮೂಲೆಗುಂಪು ಮಾಡ್ತೀದ್ದೀರಿ. 6 ಗಂಟೆಯಿಂದ 2ಗಂಟೆ ವರೆಗೆ ಅನುಮತಿ ಕೊಟ್ಟಿರೋದು ಸ್ವಾಗತಾರ್ಹ. ಆದರೆ ಸಂಜೆ ವೇಳೆಯ ಫಾಸ್ಟ್ ಫುಡ್ ಅಂಗಡಿಗಳಿಗೆ ತೊಂದರೆಯಾಗುತ್ತದೆ. ಫಾಸ್ಟ್ ಫುಡ್ ವ್ಯಾಪಾರಿಗಳು ಲಾಕ್ಡೌನ್ ಆದಾಗಿಂದಲೂ ವ್ಯಾಪಾರ ಮಾಡಿಲ್ಲ. ಈಗ ಹೋಟೆಲ್ ಗಳಿಗೆ ಪಾರ್ಸಲ್ ಅವಕಾಶ ಮುಂದುವರೆಸಿದ ಜೊತೆಗೆ ಬೀದಿ ಬದಿಯ ಫಾಸ್ಟ್ ಫುಡ್ ಅಂಗಡಿಗಳಿಗೆ ಪಾರ್ಸಲ್‍ಗೆ ಅವಕಾಶ ಮಾಡಿಕೊಡಿ ಎಂದು ಸರ್ಕಾರವನ್ನು ಒತ್ತಾಯಿಸಿದರು.

ಪಿಜಿ ಮಾಲೀಕರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಮಾತನಾಡಿ, ಲಾಕ್‍ಡೌನ್ ನಿಂದ ಪಿಜಿ ಉದ್ಯಮ ನಷ್ಟದಲ್ಲಿದೆ. ಸಾರಿಗೆ ಸಂಚಾರ ಪ್ರಾರಂಭ ಮಾಡಿದರೆ ಪಿಜಿ ಉದ್ಯಮಕ್ಕೆ ಅನುಕೂಲವಾಗುತ್ತಿತ್ತು. ಲಾಕ್‍ಡೌನ್ ಆದ ನಂತರ ಎಲ್ಲರೂ ತಮ್ಮೂರುಗಳಿಗೆ ಹೋಗಿದ್ದಾರೆ. ಈಗ ಬಸ್‍ಗಳು ಇಲ್ಲ ಹಾಗಾಗಿ ಅವರೆಲ್ಲ ಬರುವುದಕ್ಕೆ ಆಗುತ್ತಿಲ್ಲ. ಇದರಿಂದ ನಮ್ಮ ಸಂಕಷ್ಟ ಮುಂದುವರೆಯುತ್ತೆ. ಸರ್ಕಾರ ಪಿಜಿ ಮಾಲೀಕರ ಕಷ್ಟವನ್ನು ಗಮನದಲ್ಲಿ ಇಟ್ಟುಕೊಂಡಿಲ್ಲ. ನಮ್ಮ ಸಂಕಷ್ಟಕ್ಕೆ ಪರಿಹಾರವಿಲ್ಲದಂತಾಗಿದೆ. ಬಸ್‍ಗಳಿಲ್ಲ ಎಂದರೆ ನಮಗೆ ಗ್ರಾಹಕರೇ ಇರಲ್ಲ. ಎಂದು ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *