ಲಾಕ್‍ಡೌನ್ ಸಡಿಲಿಕೆಯಾಗುತ್ತಿದ್ದಂತೆ ತರಕಾರಿಗೆ ಹೆಚ್ಚಾದ ಡಿಮ್ಯಾಂಡ್

– ಹೊರ ರಾಜ್ಯ, ವಿದೇಶಗಳಿಗೆ ರಫ್ತಾಗುತ್ತಿರುವ ಟೊಮ್ಯಾಟೋ, ತರಕಾರಿ

ಕೋಲಾರ: ಎರಡುವರೆ ತಿಂಗಳ ಕಾಲ ಕೊರೊನಾ ಲಾಕ್‍ಡೌನ್‍ನಿಂದಾಗಿ ಮಾರುಕಟ್ಟೆ ಇಲ್ಲದೆ ಟೊಮ್ಯಾಟೋ ಸೇರಿದಂತೆ ತರಕಾರಿಗಳಿಗೆ ಬೆಲೆ ಇಲ್ಲದೆ ಬೀದಿಗೆ ಸುರಿಯಲಾಗುತಿತ್ತು. ಆದರೆ ಲಾಕ್‍ಡೌನ್ ಸಡಿಲಿಕೆ ಅದೃಷ್ಟವನ್ನೇ ತಂದಿದ್ದು, ಕಂಗಾಲಾಗಿದ್ದ ರೈತ ಸಮುದಾಯ ಚೇತರಿಕೆಯತ್ತ ಹೆಜ್ಜೆ ಹಾಕುತ್ತಿದ್ದಾನೆ.

ಬಯಲು ಸೀಮೆ ಕೋಲಾರ ಜಿಲ್ಲೆಯಲ್ಲಿ ಬಹುತೇಕ ರೈತರು ಟೊಮ್ಯಾಟೊ ಸೇರಿದಂತೆ ತರಕಾರಿಗಳನ್ನ ಬೆಳೆಯುತ್ತಾರೆ. ಆದರೆ ಅವರ ಶ್ರಮಕ್ಕೆ ತಕ್ಕಂತೆ ಬೆಲೆ ಸಿಗೋದು ಅಪರೂಪ. ಬೆಲೆ ಸಿಗದೇ ಬೆಳೆದ ಬೆಳೆಯನ್ನು ಬೀದಿಗೆ ಸುರಿದು ಕಣ್ಣೀರಾಕೋದು ಸಾಮಾನ್ಯ ಆಗಿತ್ತು. ಅದಕ್ಕೆ ತಕ್ಕಂತೆ ಕಳೆದ ಎರಡುವರೆ ತಿಂಗಳಿನಿಂದ ಮಹಾಮಾರಿ ಕೊರೊನಾ ರೈತರು ಬೆಳೆದ ಬೆಳೆಗಳನ್ನು ಬಲಿ ತೆಗೆದುಕೊಂಡಿತ್ತು. ಈ ಮೂಲಕ ಟೊಮ್ಯಾಟೊ ಬೆಳೆದ ರೈತರನ್ನು ಸಂಕಷ್ಟಕ್ಕೆ ದೂಡುವ ಮೂಲಕ, ಬೆಳೆಯನ್ನ ರಸ್ತೆಗಳಿಗೆ ಸುರಿಯುವುದು ಅಥವಾ ತೋಟದಲ್ಲಿಯೆ ಕೊಳೆಯವಂತಾಗಿತ್ತು.

ಹೀಗಿರುವಾಗ ಕೊರೊನಾ ಲಾಕ್‍ಡೌನ್ ಸಡಿಲಿಕೆಯ ನಂತರ ಕಳೆದೆರಡು ದಿನಗಳಿಂದ ಮೊಮ್ಯಾಟೋಗೆ ಚಿನ್ನದ ಬೆಲೆ ಸಿಕ್ಕಿದೆ. ಈ ಮೂಲಕ ಟೊಮ್ಯಾಟೋ ಬೆಲೆ ದಿಢೀರ್ ಏರಿಕೆ ಕಂಡಿದ್ದು, ಕೊರೊನಾ ಸಂಕಷ್ಟ ಕಾಲದಲ್ಲಿ ಒಂದು ಬಾಕ್ಸ್ ಟೊಮ್ಯಾಟೋ 250 ರಿಂದ 300 ರೂ.ಗೆ ಏರಿಕೆ ಕಂಡಿದೆ. ಇದೀಗ ಮೊಮ್ಯಾಟೊಗೆ ಬೆಲೆ ಬಂದಿದ್ದು, ಟೊಮ್ಯಾಟೊ ಬೆಳೆ ಇರುವಂತ ಬೆಳೆಗಾರರು ಚೇತರಿಕೆ ಕಂಡುಕೊಳ್ಳುತ್ತಿದ್ದಾರೆ. ಆದರೆ ಲಾಕ್‍ಡೌನ್‍ನಿಂದ ನಿರ್ವಹಣೆ ಮಾಡಲಾಗದೆ ನಾಶಮಾಡಿದ್ದ ಕೆಲ ರೈತರ ಹೊಟ್ಟೆಗೆ ತಣ್ಣೀರು ಬಟ್ಟೆ ಬಿದ್ದಿದೆ. ನಷ್ಟದಿಂದ ಕಣ್ಣೀರು ತರಿಸಿದ್ದ ತರಕಾರಿಗಳೆ ಇಂದು ಭರ್ಜರಿ ಲಾಭವನ್ನು ತಂದು ಕೊಡುತ್ತಿದೆ.

ಕೋಲಾರದ ಹಣ್ಣು ತರಕಾರಿಗಳಿಗೂ ಎಲ್ಲಿಲ್ಲದ ಬೇಡಿಕೆ ಬಂದಿದ್ದು, ತರಕಾರಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಉತ್ತರ ಭಾರತದ ವಿವಿದ ರಾಜ್ಯಗಳಿಂದ ಟೊಮ್ಯಾಟೋಗೆ ಬೇಡಿಕೆ ಹೆಚ್ಚಾಗಿರುವ ಪರಿಣಾಮ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮ್ಯಾಟೋಗೆ ಒಳ್ಳೆಯ ಬೆಲೆ ಬಂದಿದೆ. ಮಹಾರಾಷ್ಟ್ರ, ನಾಸಿಕ್ ಮತ್ತಿತರ ಕಡೆ ಚಂಡಮಾರುತದಿಂದ ಬೆಳೆ ನಾಶವಾಗಿರುವ ಹಿನ್ನಲೆಯಲ್ಲಿ, ಇಲ್ಲಿನ ಟೊಮ್ಯಾಟೊಗೆ ಬೇಡಿಕೆ ಹೆಚ್ಚಾಗಿದೆ. ಜೊತೆಗೆ ಮುಂದೆ ಬಾಂಗ್ಲಾದೇಶ, ಶ್ರೀಲಂಕಾ ಮತ್ತಿತರರ ನೆರೆ ರಾಷ್ಟ್ರಗಳಿಗೆ ಟೊಮ್ಯಾಟೊ ರಫ್ತು ಆಗುವುದರಿಂದ, ಮೂರರಿಂದ ನಾಲ್ಕು ತಿಂಗಳು ಕಾಲ ಟೊಮ್ಯಾಟೊಗೆ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಕೋಲಾರ ಜಿಲ್ಲೆಯ ರೈತರಿಗೆ, ವ್ಯಾಪಾರಸ್ಥರಿಗೆ ಹಾಗೂ ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡುವ ಕಾರ್ಮಿಕರೂ ಕೂಡ ಕೊಂಚ ಚೇತರಿಕೆ ಕಂಡುಕೊಳ್ಳಲಿದ್ದಾರೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ ಏರಿಕೆಯಾದ ತರಕಾರಿ ಬೆಲೆಗಳು ಇಂತಿವೆ. ಕ್ಯಾಪ್ಸಿಕಂ 35 ರೂ., ಕ್ಯಾರೆಟ್ 30 ರೂ., ಬೀಟ್ರೋಟ್ 20 ರೂ., ಎಲೆಕೋಸು 6 ರೂ., ಹೂ ಕೋಸು ಒಂದಕ್ಕೆ 15 ರೂ., ಕಲರ್ ಕ್ಯಾಪ್ಸಿಕಂ 25 ರೂ., ಟೊಮೆಟೊ 15 ರೂ., ಬಜ್ಜಿ ಮೆಣಸಿನಕಾಯಿ 35 ರೂ. ಹೀಗೆ ಬೆಲೆಗಳು ಏರಿಕೆಯಾಗಿದೆ. ಇದೇ ತರಕಾರಿಗಳು ಭಾಗಶಃ ಲಾಕ್ ಡೌನ್ ವೇಳೆ ಕೆಜಿಗೆ 10 ರೂಪಾಯಿಯನ್ನು ಮೀರಿಲ್ಲ. ಇದೀಗ ಎಂದಿನಂತೆ ತರಕಾರಿಗಳ ಬೆಲೆಯು ಹೆಚ್ಚಾಗಿ ರೈತರಿಗೆ ಎಂದಿನಂತೆ ಲಾಭ ತಂದುಕೊಡುತ್ತಿದೆ.

ಕೊರೊನಾ ಸುಳಿಯಲ್ಲಿ ಸಿಲುಕಿದ್ದ ರೈತರಿಗೆ ಅಪರೂಪಕ್ಕೊಮ್ಮೆ ತರಕಾರಿಗಳಿಗೆ ದುಬಾರಿ ಬೆಲೆ ಬಂದಿದೆ. ಇದರಿಂದ ಪದೇ ಪದೇ ಕಂಗಾಲಾಗುತ್ತಿದ್ದ, ರೈತರ ಮುಖದಲ್ಲಿ ಸ್ವಲ್ಪಮಟ್ಟಿಗೆ ಮಂದಹಾಸ ಮೂಡುವಂತಾಗಿದೆ. ಆದರೆ ಇದು ಕೂಡಾ ಅದೃಷ್ಟ ಇದ್ದವರಿಗೆ ಅನ್ನೋದೇ ಬೇಸರ ಸಂಗತಿ.

Comments

Leave a Reply

Your email address will not be published. Required fields are marked *